
ಸೋಮವಾರಪೇಟೆ ಸೆ.29 NEWS DESK : ಯುವ ಜನಾಂಗವು ಆರೋಗ್ಯಕ್ಕೆ ಹಾನಿಯುಂಟುಮಾಡುವ ದುಶ್ಚಟಗಳಂತಹ ಸಾಮಾಜಿಕ ಪಿಡುಗುಗಳಿಗೆ ದಾಸರಾಗದೆ ಉತ್ತಮ ಆರೋಗ್ಯ ಮತ್ತು ಜೀವನ ಕಂಡುಕೊಳ್ಳಲು ಸಂಕಲ್ಪ ತೊಡಬೇಕು ಎಂದು ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಹೇಳಿದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಮಾದಾಪುರ ಶ್ರೀಮತಿ ಡಿ.ಚನ್ನಮ್ಮ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ( ಎನ್ನೆಸ್ಸೆಸ್ ) ಘಟಕದ ವತಿಯಿಂದ “ನಶಾ ಮುಕ್ತ ಭಾರತ ಅಭಿಯಾನ:2025” ಎಂಬ ಕೇಂದ್ರ ವಿಷಯದಡಿ ಗರಗಂದೂರು ಗ್ರಾಮದಲ್ಲಿ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಏರ್ಪಡಿಸಿದ್ದ ನಶಮುಕ್ತ ಭಾರತ ಅಭಿಯಾನದ ಮಹತ್ವ ಕುರಿತು ಉಪನ್ಯಾಸ ನೀಡಿದರು. ಸಮಾಜ ಹಾಗೂ ಆರೋಗ್ಯ ಹಾಳು ಮಾಡುವ ದುಶ್ಚಟಗಳಿಂದ ಎಲ್ಲರೂ ದೂರವಿದ್ದು ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು. ಯುವಕರು ದೇಶದ ಆಸ್ತಿಯಾಗಬೇಕೇ ವಿನಾಃ ಯುವಜನತೆ ಮಾದಕ ಪದಾರ್ಥಗಳ ನಶೆಯುಕ್ತ ಯಾವುದೇ ಪದಾರ್ಥಗಳನ್ನು ಸೇವಿಸದೇ ಸಮೃದ್ಧ ಭಾರತದ ಕನಸಿಗೆ ಪುಷ್ಟಿ ನೀಡುವ ಮೂಲಕ ನಶಮುಕ್ತ ಭಾರತ ನಿರ್ಮಾಣಕ್ಕೆ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಪ್ರೇಮಕುಮಾರ್ ಹೇಳಿದರು. ಮಾದಕ ವ್ಯಸನಗಳಿಗೆ ದಾಸನಾದನೆಂದರೆ ನಾವು ಕಾಸು ಕೊಟ್ಟು ರೋಗಗಳನ್ನು ಅಪ್ಪಿಕೊಂಡಂತೆ. ಮಾದಕ ವಸ್ತುಗಳ ಬಳಕೆಯಿಂದ ಯುವಕರು ಮಾನಸಿಕವಾಗಿ ಹಾಗೂ ದೈಹಿಕವಾಗಿ ದುರ್ಬಲನಾಗಿ ಹಲವು ರೋಗಗಳಿಗೆ ತುತ್ತಾಗುತ್ತಾರೆ. ಓದಿನಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಮೆದುಳು, ಹೃದಯ ಸಂಬಂಧಿ ಕಾಯಿಲೆಗಳು, ರಕ್ತದೊತ್ತಡ ಹೀಗೆ ಹಲವು ಮಾರಕ ರೋಗಗಳಿಗೆ ಆಧಿಪತಿಯಾಗುತ್ತಾನೆ. ಆದ್ದರಿಂದ, ಯುವಜನರು ಮಾದಕವಸ್ತುಗಳ ಸೇವನೆಯಿಂದ ದೂರವಿದ್ದು, ಉತ್ತಮ ಆರೋಗ್ಯ ಕಂಡುಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು. ಕಾಲೇಜಿನ ಪ್ರಾಂಶುಪಾಲ ಸಿ.ಜಿ.ಮಂದಪ್ಪ ಮಾತನಾಡಿ, ವ್ಯಸನಮುಕ್ತ ಭಾರತ ಅಭಿಯಾನದ ಮೂಲಕ ವಿದ್ಯಾರ್ಥಿಗಳು ಉತ್ತಮ ಸಮಾಜ ನಿರ್ಮಾಣಕ್ಕೆ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಸಹ ಶಿಬಿರಾಧಿಕಾರಿ ಎಸ್. ಮೋಹನ್ ಹೆಗ್ಡೆ ಮಾತನಾಡಿ, ವಿದ್ಯಾರ್ಥಿಗಳು ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಪಣ ತೊಡಬೇಕು ಎಂದರು. ಹರದೂರು ಗ್ರಾಮ ಪಂಚಾಯತಿ ಸದಸ್ಯರಾದ ಕೆ.ಕೆ.ರಮೇಶ್, ರಾಯಲ್ ಫಾರ್ಮ ಕ್ಲಬ್ ನ ಅಧ್ಯಕ್ಷ ಎಂ.ಇ.ನಂದಕುಮಾರ್ ಮಾತನಾಡಿದರು. ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಎನ್.ಎನ್. ಮನೋಹರ್,ಗ್ರಾಮ ಪಂಚಾಯತಿ ಸದಸ್ಯ ಕುಸುಮ ಇದ್ದರು .ಶಿಬಿರಾರ್ಥಿ ಪಿ.ಎಸ್.ಸ್ನೇಹ ಸ್ವಾಗತಿಸಿದರು. ಶಿಬಿರಾರ್ಥಿ ನಮ್ರತ
ವಂದಿಸಿದರು. ಶಿಬಿರಾರ್ಥಿ ರಕ್ಷಾ ಕಾರ್ಯಕ್ರಮ ನಿರ್ವಹಿಸಿದರು. ಶಿಬಿರಾರ್ಥಿಗಳು ಎನ್.ಎಸ್.ಎಸ್.ಗೀತೆ ಹಾಡಿದರು. *ಶಿಬಿರಾರ್ಥಿಗಳಿಂದ ಜನ ಜಾಗೃತಿ ಅಭಿಯಾನ* ನಶಮುಕ್ತ ಭಾರತ ಅಭಿಯಾನದ ಅಂಗವಾಗಿ ಶಿಬಿರಾರ್ಥಿಗಳು ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿವಿಧ ಘೋಷಣಾ ಫಲಕಗಳನ್ನು ಹಿಡಿದು ಜನಜಾಗೃತಿ ಮೂಡಿಸಿದರು.









