
ಮಡಿಕೇರಿ NEWS DESK ಅ.1 : ನಗರದ ನಾಲ್ಕು ಶಕ್ತಿ ದೇವತೆಗಳ ಪೈಕಿ ಹಿರಿಯ ಅಕ್ಕಳೆಂದೆ ಖ್ಯಾತಿಯಾಗಿರುವ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿ 52 ನೇ ವರ್ಷದ ಉತ್ಸವ ಆಚರಣೆಗೆ ಸಜ್ಜಾಗುತ್ತಿದೆ ಎಂದು ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ ದೇವಾಲಯ ದಸರಾ ಮಂಟಪ ಸಮಿತಿ ಅಧ್ಯಕ್ಷ ಎ.ಆರ್.ಮಂಜುನಾಥ್ ತಿಳಿಸಿದ್ದಾರೆ. ಎರಡು ಟ್ಯಾಕ್ಟರ್ ಗಳನ್ನು ಬಳಸಲಾಗುತ್ತಿದ್ದು, ಶಿವ ಪುರಾಣದ 11 ರಿಂದ 16 ಅಧ್ಯಾಯದ ಪರಶಿವನಿಂದ ಜಲಾಂಧರನ ವಧೆ ಎಂಬ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ. ಕಥಾ ಸಂಪೂರ್ಣ ಜವಾಬ್ದಾರಿಯನ್ನು ಸಾರಾಂಶದ ಸುಬ್ರಹ್ಮಣ್ಯ ಕುಮಾರ್ ಹಾಗೂ ಹೇಮಂತ್ ಪೂಜಾರಿ ನಿಭಾಯಿಸಲಿದ್ದು, 22 ಕಲಾಕೃತಿಗಳನ್ನು ಬಳಸಲಾಗುತ್ತಿದೆ. ಕಲಾಕೃತಿಗಳನ್ನು ಹುದುಬೂರಿನ ಸ್ಟುಡಿಯೋ ಹಾಗೂ ಕ್ರಾಕರ್ಸ್ ವ್ಯವಸ್ಥೆಯನ್ನು ಮಡಿಕೇರಿಯ ಇವೆಂಟ್ ಟೆಕ್‌ನ ಅವೀನ್ ಕುಮಾರ್ ತಂಡ ಮಾಡಲಿದೆ. ಧ್ವನಿವರ್ಧಕವನ್ನು ಮಡಿಕೇರಿಯ ಸಂದೇಶ್ ಶೆಟ್ಟಿ, ಮದನ್ ಸಂತೋಷ್ ರೈ ಒದಗಿಸಲಿದ್ದು, ಕಲಾಕೃತಿಗಳಿಗೆ ಚಲನವಲನವನ್ನು ನಿಕ್ಕಿಲ್, ಮಿಥುನ್, ಸಂದೇಶ್, ಪವನ್, ಲಾರೆನ್ಸ್, ಮೋಹನ್, ಹೇಮಂತ್, ಹರೀಶ್, ಸಂಪತ್ ಮತ್ತು ತಂಡ ನೀಡಲಿದೆ. ಕಲಾಕೃತಿ ಅಲಂಕಾರ ಖಾದರ್, ಪದ್ಮನಾಭ, ಶಿವರಾಂ ಮಾಡಲಿದ್ದು, ದಿಂಡಿಗಲ್‌ನ ನ್ಯೂಮಾತಾ ಎಲೆಕ್ಟ್ರಿಕಲ್‌ನವರು ಲೈಟಿಂಗ್ ಬೋರ್ಡ್ ಅಳವಡಿಸಲಿದ್ದಾರೆ. ಕೊಡಗಿನ ಸಾಂಪ್ರದಾಯಿಕ ವಾಲಗ ಮಂಟಪವನ್ನು ಮುನ್ನಡೆಸಲಿದ್ದು, ಟ್ಯಾಕ್ಟರ್ ಸೆಟ್ಟಿಂಗ್ಸ್ ಅನ್ನು ಕಲಾನಗರದ ಮಂಜು ಮತ್ತು ಸಮಿತಿ ಸದಸ್ಯರ ತಂಡ ಮಾಡಲಿದೆ. ಅಂದಾಜು ರೂ. 22 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದೆ ಎಂದು ಮಂಜುನಾಥ್ ಮಾಹಿತಿ ನೀಡಿದ್ದಾರೆ.









