
ಮಡಿಕೇರಿ NEWS DESK ಅ.1 : ನಗರದ ಶ್ರೀ ಕರವಲೆ ಭಗವತಿ ಮಹಿಷ ಮರ್ದಿನಿ ದೇವಾಲಯ ದಸರಾ ಮಂಟಪ ಸಮಿತಿ 30ನೇ ವರ್ಷದ ಉತ್ಸವ ಆಚರಣೆಗೆ ಸಜ್ಜಾಗುತ್ತಿದೆ ಎಂದು ಕರವಲೆ ಭಗವತಿ ಮಹಿಷ ಮರ್ದಿನಿ ದೇವಾಲಯ ದಸರಾ ಮಂಟಪ ಸಮಿತಿ ಅಧ್ಯಕ್ಷ ಆಪಾಡಂಡ ವಿನೋದ್ ಕಾರ್ಯಪ್ಪ ತಿಳಿಸಿದ್ದಾರೆ. ಎರಡು ಟ್ರ್ಯಾಕ್ಟರ್ ಗಳನ್ನು ಬಳಸಲಾಗುತ್ತಿದ್ದು, ಸಂಜೀವಿನಿ ಸಸ್ಯಕ್ಕಾಗಿ ದ್ರೋಣಗಿರಿಯನ್ನು ಹೊತ್ತು ತರುವ ಆಂಜನೇಯ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗಿತ್ತಿದೆ. ದಿಂಡ್‌ಗಲ್ ಸೆಲ್ವಂ ಲೈಟಿಂಗ್ ಬೋರ್ಡ್ ಅಳವಡಿಸಲಿದ್ದಾರೆ. ಮಡಿಕೇರಿಯ ಸ್ಕಂದ ಲೈಟಿಂಗ್ಸ್ ಅನಿಲ್ ಧ್ವನಿವರ್ಧಕ ಒದಗಿಸಲಿದ್ದು, ಬೆಂಗಳೂರಿನ ಅನು ಪ್ರೊ ಇವೆಂಟ್‌ನವರು ಸ್ಟುಡಿಯೋ ಸೆಟ್ಟಿಂಗ್ಸ್ ಮಾಡಲಿದ್ದಾರೆ. ಪ್ಲಾಟ್‌ಫಾರಂ ನಿರ್ಮಾಣ, ಟ್ರ್ಯಾಕ್ಟರ್ ಸೆಟ್ಟಿಂಗ್ಸ್, ಕಲಾಕೃತಿಗಳಿಗೆ ಚಲನವಲನ ವ್ಯವಸ್ಥೆಯನ್ನು ಸಮಿತಿ ಸದಸ್ಯರೇ ಮಾಡಲಿದ್ದಾರೆ. 18 ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಮಡಿಕೇರಿ ಶೋಮ್ಯಾನ್ ಕ್ರಿಯೇಷನ್ಸ್ನ ಸಂದೀಪ್, ಹುದುಬೂರಿನ ನಾಗರಾಜು ಕಲಾಕೃತಿಗಳನ್ನು ತಯಾರಿಸಲಿದ್ದಾರೆ. ಫೈರ್ ಎಫೆಕ್ಟ್ ನ್ನು ಬೆಂಗಳೂರಿನ ವೈಎಫ್‌ಎಕ್ಸ್ ಫೈರ್ ವರ್ಕ್ಸ್ನವರು ನೀಡಲಿದ್ದಾರೆ. ರೂ.26 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದ್ದು, ಕಕ್ಕಬೆಯಾ ವಾಲಗ ಮಂಟಪವನ್ನು ಮುನ್ನಡೆಸಲಿದೆ ಎಂದು ವಿನೋದ್ ಕಾರ್ಯಪ್ಪ ಮಾಹಿತಿ ನೀಡಿದರು.









