
ಮಡಿಕೇರಿ ಅ.25 NEWS DESK : ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಮೃತ್ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಬೇಕು ಎಂದು ನಗರಸಭೆಯ ಮಾಜಿ ಸದಸ್ಯ ಕೆ.ಎಂ.ಗಣೇಶ್ ಒತ್ತಾಯಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಮೃತ್ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದ್ದು, ಯೋಜನೆ ಪೂರ್ಣಗೊಳ್ಳುವ ಬಗ್ಗೆ ವಿಶ್ವಾಸವಿಲ್ಲ ಎಂದು ಆರೋಪಿಸಿದರು.
ಮಡಿಕೇರಿ ನಗರ ಬೆಟ್ಟಗುಡ್ಡಗಳಿಂದ ಕೂಡಿದ್ದು, ಅಮೃತ್ ಯೋಜನೆ ಇಲ್ಲಿಗೆ ಪೂರಕವಾಗಿಲ್ಲ. ಸುಮಾರು 12 ವರ್ಷಗಳ ಹಿಂದೆ 49 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡ ಯುಜಿಡಿ ಒಳಚರಂಡಿ ಯೋಜನೆ ವಿಫಲವಾಗಿದೆ. ಇದೇ ಮಾದರಿಯಲ್ಲಿ 38 ಕೋಟಿ ರೂ. ವೆಚ್ಚದ ಅಮೃತ್ ಯೋಜನೆ ಕೂಡ ವಿಫಲವಾಗಲಿದೆ. ಈಗಾಗಲೇ ಶೇ.25 ರಷ್ಟು ಕಾಮಗಾರಿ ಮುಗಿದಿದ್ದು, ಇದು ಅವೈಜ್ಞಾನಿಕವಾಗಿದೆ. ಪೈಪ್ ಅಳವಡಿಕೆಗಾಗಿ ತೆಗೆದಿರುವ ಗುಂಡಿಗಳಿಂದ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿವೆ, ವಾಹನಗಳ ಸಂಚಾರ ದುಸತರವಾಗಿದೆ. ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಈ ಗುಂಡಿಗಳಲ್ಲಿ ನೀರು ನಿಂತು ಭೂಕುಸಿತದಂತಹ ಅನಾಹುತಗಳು ಸಂಭವಿಸುವ ಸಾಧ್ಯತೆ ಎಂದು ಗಮನ ಸೆಳೆದರು. ಯುಜಿಡಿ ಯೋಜನೆಯ ಹಣ ಮಣ್ಣು ಪಾಲಾಗಿದೆ, ಇದೀಗ ಕೇಂದ್ರ ಮತ್ತು ರಾಜ್ಯ ಸರಕಾರದ ಸಹಭಾಗಿತ್ವದ ಅಮೃತ್ ಯೋಜನೆಯ ಹಣವೂ ವ್ಯರ್ಥವಾಗಬೇಕೆ ಎಂದು ಪ್ರಶ್ನಿಸಿದ ಕೆ.ಎಂ.ಗಣೇಶ್, ಯಾರದ್ದೋ ದುಡ್ಡಿನಲ್ಲಿ ಜಾತ್ರೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಗರದ ಅಭಿವೃದ್ಧಿ ಮತ್ತು ಜನರ ಹಿತದೃಷ್ಟಿಯಿಂದ ಶಾಸಕರು ಮಧ್ಯ ಪ್ರವೇಶ ಮಾಡಿ ‘ಅಮೃತ್’ ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಬೇಕು. ನಗರಸಭೆ ತುರ್ತು ಸಭೆ ನಡೆಸಿ ಕಾಮಗಾರಿ ಸ್ಥಗಿತಗೊಳಿಸಲು ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪ್ರಸ್ತುತ ಇರುವ ವ್ಯವಸ್ಥೆಯಲ್ಲೇ ಉತ್ತಮ ರೀತಿಯಲ್ಲಿ ನೀರು ಸರಬರಾಜು ಮಾಡಿದರೆ ನಗರಕ್ಕೆ ‘ಅಮೃತ್’ ಯೋಜನೆಯ ಅಗತ್ಯವಿಲ್ಲ. ನಿಷ್ಪ್ರಯೋಜಕ ಯೋಜನೆಗೆ ಹಣ ವ್ಯರ್ಥ ಮಾಡುವ ಬದಲು ಹದಗೆಟ್ಟಿರುವ ರಸ್ತೆಗಳ ಅಭಿವೃದ್ಧಿಗೆ ಅನುದಾನವನ್ನು ಬಳಕೆ ಮಾಡಲಿ ಎಂದು ಸಲಹೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಪುರಸಭೆಯ ಮಾಜಿ ಸದಸ್ಯ ಎಂ.ಪಿ.ಕೃಷ್ಣರಾಜು, ಪ್ರಮುಖರಾದ ಅನಿಲ್ ಕೃಷ್ಣಾನಿ, ಹೆಚ್.ಮಂಜುನಾಥ್, ಹೆಚ್.ಆರ್.ಜಗದೀಶ್ ಹಾಗೂ ಎನ್.ಸಿ.ಸುನಿಲ್ ಉಪಸ್ಥಿತರಿದ್ದರು.









