
ವಿರಾಜಪೇಟೆ ಅ.28 NEWS DESK : ವಿರಾಜಪೇಟೆ ಸಮೀಪದ ಬೇಟೋಳಿ ಗ್ರಾಮದಲ್ಲಿರುವ ಶಕ್ತಿ ವ್ರದ್ಧಾಶ್ರಮದಲ್ಲಿ 12 ವರ್ಷದ ಬಾಲಕಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಮೂಲಕ ಮಾನವೀಯತೆ ಮೆರೆದಿದ್ದಾಳೆ. ವಿರಾಜಪೇಟೆಯ ಆರ್ಜಿ ಗ್ರಾಮದ ಕಲ್ಲುಬಾಣೆಯ ನಿವಾಸಿ ಕಿರಣ್ ಹಾಗೂ ರಜಿತ ದಂಪತಿಗಳ ಪುತ್ರಿ ಕೆ.ಈಶಾನ್ವಿ(ನಮನ) ಪ್ರತಿ ವರ್ಷ ತಮ್ಮ ಹುಟ್ಟುಹಬ್ಬವನ್ನು ವೃದ್ಧಾಶ್ರಮದಲ್ಲಿ ಆಚರಣೆ ಮಾಡಿಕೊಳ್ಳುತ್ತಿದ್ದು, ಈ ಬಾರಿಯೂ ವೃದ್ಧ ಜೀವಗಳೊಂದಿಗೆ ಬೆರೆತು ಕೆಕ್ ಕತ್ತರಿಸಿ, ಸಿಹಿ ಹಂಚಿ ಅವರ ಸಂತೋಷಕ್ಕೆ ಕಾರಣಕರ್ತಳಾದಳು. ಕೆ.ಈಶಾನ್ವಿ(ನಮನ) ವಿರಾಜಪೇಟೆಯ ಅರಮೇರಿಯ ಎಸ್‍ಎಂಎಸ್ ಶಾಲೆಯಲ್ಲಿ 7 ತರಗತಿಯಲ್ಲಿ ಓದುತ್ತಿದ್ದಾಳೆ. ಆಸರೆ ಇಲ್ಲದ ವೃದರಿಗೆ ಸಹಾಯ ಮಾಡಬೇಕು, ಅವರೊಂದಿಗೆ ನಾವಿದ್ದೇವೆ ಅನ್ನುವ ಸಂದೇಶ ಕೊಡಬೇಕು, ಅವರು ಯಾವಾಗಲು ಸಂತೋಷದಿಂದ ಇರಬೇಕು, ಹಿರಿಯರನ್ನು ಗೌರವಿಸಬೇಕು ಅನ್ನುವ ಉದ್ದೇಶ. ಎಲ್ಲಕ್ಕಿಂತ ಮಿಗಿಲಾಗಿ ಮಾನವ ಯಾವಾಗಲು ಮಾನವೀಯ ನೆಲೆಗಟ್ಟಿನಲ್ಲಿ ಬದುಕಬೇಕು, ಮಾನವೀಯತೆ ಮೈಗೂಡಿಸಿಕೊಂಡು ಜೀವನ ಸಾಗಿಸಬೇಕು. ಏಕೆಂದರೆ ಮಾನವೀಯತೆ ಮರೆತರೆ ಸಮಾಜದಲ್ಲಿ ಬದುಕಲು ಸಾಧ್ಯವಿಲ್ಲ. ಈ ಹಿಂದೆ ನಮ್ಮ ಕುಟುಂಬದಲ್ಲಿ ಉಂಟಾದ ಅನಾರೋಗ್ಯ, ಅಪಘಾತ ಇವೆಲ್ಲವೂ ನಮ್ಮನ್ನು ಭಾಧಿಸಿದೆ. ಆವಾಗ ನಮ್ಮ ನೆರವಿಗೆ ಬಂದಿದ್ದು ಕೇವಲ ಹಣ, ಆಸ್ತಿ, ಸಂಬಂಧ ಅಲ್ಲ. ಎಲ್ಲ ಆತ್ಮೀಯ ವರ್ಗದವರ ಸಹಾಯ, ಪ್ರೀತಿ, ವಿಶ್ವಾಸ, ಪ್ರಾರ್ಥನೆ. ಹಾಗಾಗಿ ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ಮಾನವೀಯ ಗುಣಗಳನ್ನು ಅಳವಡಿಸಿಕೊಂಡು ಜೀವನ ಸಾಗಿಸಬೇಕು ಎಂದು ಈಶಾನ್ವಿಯ ಅಭಿಪ್ರಾಯ ವ್ಯಕ್ತಪಡಿಸಿದಳು. ಪ್ರತಿ ಹುಟ್ಟುಹಬ್ಬವನ್ನು ಇದೇ ರೀತಿ ವಿವಿಧ ಕಡೆಗಳಲ್ಲಿ ಅಂಧರ ಶಾಲೆ, ಶ್ರವಣ ದೋಷವಿರುವ ವಿದ್ಯಾರ್ಥಿಗಳ ಶಾಲೆಗಳಲ್ಲಿ, ವೃದ್ಧಶ್ರಮಗಲ್ಲಿ ಆಚರಿಸುತ್ತ ಬರುತ್ತಿದ್ದೇವೆ. ಬೆಳೆದು ದೊಡ್ಡವಳಾದರೂ ನಾನು ಅನಾಥರಿಗೆ ದಾರಿ ದೀಪವಾಗುವ ಕೆಲಸ ಮಾಡುತ್ತೇನೆ. ತಂದೆ ತಾಯಿಗಳ ಮಾರ್ಗದರ್ಶನದಲ್ಲಿ ಇದೇ ರೀತಿ ಮುಂದುವರೆಯುತ್ತೇನೆ ಎಂದಳು. ಈ ಸಂದರ್ಭ ಈಶಾನ್ವಿಯ ಪೋಷಕರು ಜೊತೆಗಿದ್ದರು.









