ಮಡಿಕೇರಿ NEWS DESK ನ.5 : ಸ್ವಾತಂತ್ರ್ಯ ಹೋರಾಟಗಾರ, ಹುತಾತ್ಮ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಸಂದೇಶಗಳನ್ನು ರವಾನಿಸಿರುವ ವ್ಯಕ್ತಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕೊಡಗು ಗೌಡ ಸಮಾಜಗಳ ಒಕ್ಕೂಟ ದೂರು ದಾಖಲಿಸಿದೆ. ಕಳೆದ ಅ.31 ರಂದು ಅಪ್ಪಯ್ಯಗೌಡರ ಸಂಸ್ಮರಣಾ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಫೇಸ್‌ಬುಕ್ ಖಾತೆಯಲ್ಲಿ ‘ಸ್ವಾತಂತ್ರ್ಯ ಹೋರಾಟಗಾರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ಸ್ಮರಿಸುವ’ ಎಂಬ ಪೋಸ್ಟ್ನಲ್ಲಿ ಹಲವಾರು ಪರ ವಿರೋಧ ಚರ್ಚೆ ನಡೆದಿದೆ. ಈ ಪೋಸ್ಟ್ನಲ್ಲಿ ಅರೆಯಡ ರಾಜ ಎಂಬ ವ್ಯಕ್ತಿ ಕೊಡಗಿನ ಇತಿಹಾಸವನ್ನು ತಿರುಚಿ ಹಾಲೇರಿ ರಾಜ ವಂಶಸ್ಥರನ್ನು ಹೀನಾಯವಾಗಿ ನಿಂದಿಸಿ, ಅಪ್ಪಯ್ಯಗೌಡರ ವಿರುದ್ಧ ಅವಹೇಳನಕಾರಿಯಾಗಿ ಸಂದೇಶಗಳನ್ನು ಹಾಕಿದ್ದಲ್ಲದೆ ಗೌಡ ಜನಾಂಗದವರನ್ನು ನಿಂದಿಸಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.
ಈ ರೀತಿಯ ಅವಹೇಳನಕಾರಿ ಸಂದೇಶಗಳನ್ನು ಹರಿಯಬಿಟ್ಟಿರುವ ರಾಜ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ ಹಾಗೂ ಪದಾಧಿಕಾರಿಗಳು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ. ದೂರು ಸಲ್ಲಿಸುವ ಸಂದರ್ಭ ಗೌಡ ಸಮಾಜಗಳ ಒಕ್ಕೂಟದ ಕಾರ್ಯದರ್ಶಿ ಪೇರಿಯನ ಉದಯ ಕುಮಾರ್, ಖಜಾಂಚಿ ನವೀನ್ ಅಂಬೆಕಲ್, ಕಾನೂನು ಸಲಹೆಗಾರ ಕೊಂಬಾರನ ರೋಷನ್ ಹಾಗೂ ಕೊಡಗು ಗೌಡ ಯುವ ವೇದಿಕೆ ಕಾರ್ಯದರ್ಶಿ ಪುದಿಯನೆರವನ ರಿಷಿತ್ ಹಾಜರಿದ್ದರು.










