ಮಡಿಕೇರಿ ನ.7 NEWS DESK : ಭಾರತದಲ್ಲಿ ಮಾನಸಿಕ ಆರೋಗ್ಯದ ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಈ ನಿಟ್ಟಿನಲ್ಲಿ ಮಕ್ಕಳಲ್ಲಿನ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಕಂಡುಕೊಳ್ಳುವ ಮತ್ತು ಅವುಗಳನ್ನು ಬಗೆಹರಿಸುವ ಪ್ರಯತ್ನಗಳಿಗೆ ಪೂರಕವಾಗಿ ಮೈಂಡ್ ಅಂಡ್ ಮ್ಯಾಟರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೆಂಗಳೂರು ನಿಮ್ಹಾನ್ಸ್ ಸಹಯೋಗದೊಂದಿಗೆ ನ.8 ರಿಂದ 15ರವರೆಗೆ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಲ್ಲಿ ‘ಮಾನಸಿಕ ಆರೋಗ್ಯ ಜಾಗೃತಿ ಅಭಿಯಾನ’ ನಡೆಯಲಿದೆ. ನಗರದದಲ್ಲಿ ಸುದ್ದಿಗೋಷ್ಠಿಯಲ್ಲಿ ಮೈಂಡ್ ಅಂಡ್ ಮ್ಯಾಟರ್ಸ್ ಚಾರಿಟೇಬಲ್ ಟ್ರಸ್ಟ್‍ನ ಟ್ರಸ್ಟಿಗಳಾದ ಡಾ.ಎಂ.ಎ.ಅಚ್ಚಯ್ಯ ಅವರು ಮಾತನಾಡಿ, ಶಿಕ್ಷಣ ಮತ್ತು ಮಾನಸಿಕ ಆರೋಗ್ಯದ ಮೂಲಕ ಸಶಕ್ತ ಸಮಾಜವನ್ನು ರೂಪಿಸುವ ಉದ್ದೇಶ ಸಂಸ್ಥೆಯದ್ದು. ಈ ಹಿನ್ನೆಲೆ ಸಂಸ್ಥೆಯು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ 180ಕ್ಕೂ ಹೆಚ್ಚಿನ ತರಬೇತಿ ಪಡೆದ ಸ್ವಯಂ ಸೇವಕರೊಂದಿಗೆ ಕೊಡಗು, ಮೈಸೂರು, ಹಾಸನ ವಿಭಾಗದ 14 ಸಾವಿರಕ್ಕೂ ಹೆಚ್ಚಿನ ಮಕ್ಕಳಿಗೆ, ಸಾವಿರಕ್ಕು ಹೆಚ್ಚಿನ ವಯಸ್ಕರಿಗೆ ಮಾನಸಿಕ ಆರೋಗ್ಯದ ಕಾರ್ಯಾಗಾರಗಳನ್ನು ನಡೆಸಿರುವುದಾಗಿ ಮಾಹಿತಿ ನೀಡಿ, ಈ ಬಾರಿ ಕಾರ್ಯಕ್ರಮವನ್ನು ಮಂಗಳೂರಿಗೂ ವಿಸ್ತ್ತರಿಸುವ ಚಿಂತನೆ ಇರುವುದಾಗಿ ತಿಳಿಸಿದರು. ಕೊಡಗಿನಲ್ಲಿ ನ.8 ರಿಂದ ವಾರದ ಕಾಲ ಜಿಲ್ಲೆಯ ವಿವಿಧ ಶಾಲಾ ಕಾಲೇಜು ಮಕ್ಕಳಿಗೆ ಚಟುವಟಿಕೆ ಆಧಾರಿತವಾಗಿ ಮಾನಸಿಕ ಆರೋಗ್ಯದ ಬಗ್ಗೆ ಅರಿವನ್ನು ಮೂಡಿಸುವ ಪ್ರಯತ್ನ ಮಾಡಲಿದೆಯೆಂದು ತಿಳಿಸಿದರು. :: ಭಾರತೀಯ ವಿದ್ಯಾಭವನದಲ್ಲಿ ಉದ್ಘಾಟನೆ :: ಮೈಡ್ ಅಂಡ್ ಮ್ಯಾಟರ್ ಚಾರಿಟೇಬಲ್ ಟ್ರಸ್ಟ್‍ನ ಟ್ರಸ್ಟಿ ಎಂ.ಎ.ದೀಪಿಕಾ ಅವರು ಮಾತನಾಡಿ, ‘ಮಾನಸಿಕ ಆರೋಗ್ಯ ಜಾಗೃತಿ ಅಭಿಯಾನ’ಕ್ಕೆ ನ.8 ರಂದು ಸಂಜೆ 4.30 ಗಂಟೆಗೆ ನಗರದ ಭಾರತೀಯ ವಿದ್ಯಾಭವನದಲ್ಲಿ ಚಾಲನೆ ದೊರಕಲಿದೆ. ಕಾರ್ಯಕ್ರಮದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ನಿಮ್ಹಾನ್ಸ್‍ನ ಸೈಕಿಯಾಟ್ರಿಕ್ ಸೋಶಿಯಲ್ ವರ್ಕ್ ಪ್ರಾಧ್ಯಾಪಕರಾದ ಡಾ.ಅರವಿಂದ ಇ.ರಾಜ, ರೊಟೇರಿಯನ್ ಬಿ.ಜಿ. ಅನಂತಶಯನ, ಕಾರ್ಯಕ್ರಮ ಸಂಯೋಜಕರಾದ ಶೀತಲ್ ಸೋಮಯ್ಯ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು. ಕೊಡಗಿನಲ್ಲಿ ನಡೆಯುವ ಅಭಿಯಾನದಲ್ಲಿ 44 ಸ್ವಯಂ ಸೇವಕರೊಂದಿಗೆ ವಾರದ ಕಾಲ ವಿವಿಧ ಶಾಲಾ ಕಾಲೇಜುಗಳಲ್ಲಿ ಕ್ರಿಯಾತ್ಮಕವಾದ ಕಾರ್ಯಾಗಾರಗಳು ನಡೆಯಲಿರುವುದಾಗಿ ಮಾಹಿತಿಯನ್ನಿತ್ತ ಅವರು, ಮಾನಸಿಕ ಅಸ್ವಸ್ಥತೆ ಇಲ್ಲದಿರುವುದೇ ಉತ್ತಮ ಮಾನಸಿಕ ಆರೋಗ್ಯದ ಖಾತರಿ ಅಲ್ಲ ಎನ್ನುವುದನ್ನು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳುವುದು ಅವಶ್ಯವೆಂದರು.











