ಮಡಿಕೇರಿ NEWS DESK ನ.15 : ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಅವಹೇಳನ ಮಾಡಿರುವ ಪ್ರಕರಣವನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ. ಬಿಹಾರ ಚುನಾವಣೆಯ ಫಲಿತಾಂಶದ ಕುರಿತು ಪೊನ್ನಣ್ಣ ಅವರು ಮಾಧ್ಯಮಗಳಿಗೆ ನೀಡಿದ್ದ ಅಭಿಪ್ರಾಯಕ್ಕೆ ಪ್ರತಿಯಾಗಿ ಫೇಸ್ ಬುಕ್ ಖಾತೆಯಲ್ಲಿ ಕೆಲವರು ಅವಾಚ್ಯ ಪದಗಳನ್ನು ಬಳಸಿ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ ಪೊನ್ನಣ್ಣ ಅವರ ಕುಟುಂಬದ ಸದಸ್ಯರನ್ನು ತೇಜೋವಧೆ ಮಾಡಿದ್ದಾರೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಸಾಮಾಜಿಕ ಜಾಲತಾಣ ಘಟಕ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದೆ. ದೂರು ಸಲ್ಲಿಸಿ ಮಾತನಾಡಿದ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು ಅವರು ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಅವಹೇಳನಕಾರಿ ಶಬ್ಧಗಳನ್ನು ಬಳಸಿ ಶಾಸಕರನ್ನು ತೇಜೋವಧೆ ಮಾಡಿರುವವರನ್ನು ತಕ್ಷಣ ಪೊಲೀಸರು ವಶಕ್ಕೆ ಪಡೆದು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ದೂರು ಸಲ್ಲಿಸುವ ಸಂದರ್ಭ ಶಾಸಕರ ಮಾಧ್ಯಮ ವಿಭಾಗದ ಪೆಮ್ಮಂಡ ವಿನಿಲ್ ಸೋಮಣ್ಣ, ಯುವ ಕಾಂಗ್ರೆಸ್ ಪ್ರಮುಖ ಸಿರಾಜ್ ಚೆರಿಯಪರಂಬು ಮತ್ತಿತರರು ಹಾಜರಿದ್ದರು.










