
ಮಡಿಕೇರಿ NEWS DESK ನ.25 : ಆದಾಯ ಮೀರಿದ ಆಸ್ತಿ ಗಳಿಕೆ ಆರೋಪದಡಿ ಮೈಸೂರು ಹಾಗೂ ಕೊಡಗು ಲೋಕಾಯುಕ್ತ ಅಧಿಕಾರಿಗಳು ಕೊಡಗು ಜಿಲ್ಲಾ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಡಿ.ಎಂ.ಗಿರೀಶ್ ಅವರ ಕಚೇರಿ ಮತ್ತು ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಲೋಕಾಯುಕ್ತ ಡಿವೈಎಸ್‌ಪಿ ದಿನಕರ್ ಶೆಟ್ಟಿ ಮಾರ್ಗದರ್ಶನದಲ್ಲಿ ಮಡಿಕೇರಿ ಲೋಕಾಯುಕ್ತ ನಿರೀಕ್ಷಕಿ ವೀಣಾ ನಾಯಕ್ ಹಾಗೂ ಸಿಬ್ಬಂದಿಗಳು ಮಡಿಕೇರಿಯ ಲೋಕೋಪಯೋಗಿ ಇಲಾಖೆ ಕಚೇರಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಡಿ.ಎಂ.ಗಿರೀಶ್ ಅವರ ಸರಕಾರಿ ನಿವಾಸ ಮತ್ತು ಮೈಸೂರು ನಿವಾಸದಲ್ಲಿ ಶೋಧ ಕಾರ್ಯ ನಡೆಸಿದರು. ಬೆಳಗ್ಗಿನಿಂದ ಸಂಜೆಯವರೆಗೆ ಮೂರು ಕಡೆಗಳಲ್ಲಿ ಶೋಧ ನಡೆಸಿದ ಅಧಿಕಾರಿಗಳು ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ. ಲೋಕಾಯುಕ್ತ ಶೋಧ ಕಾರ್ಯಾಚರಣೆ ಸಂದರ್ಭ ಡಿ.ಎಂ. ಗಿರೀಶ್ ಅವರ ಸ್ಥಿರ ಆಸ್ತಿ 1 ಕೋಟಿ 89 ಲಕ್ಷದ 94 ಸಾವಿರ ರೂ. ಮೌಲ್ಯದ 4 ನಿವೇಶನ, 1 ವಾಸದ ಮನೆ, 5 ಲಕ್ಷದ 53 ಸಾವಿರದ 715 ರೂ. ನಗದು, 1 ಕೋಟಿ 81 ಲಕ್ಷ 92 ಸಾವಿರದ 690 ರೂ. ಮೌಲ್ಯದ ಚಿನ್ನಾಭರಣ, 9 ಲಕ್ಷ ರೂ. ಮೌಲ್ಯದ ವಾಹನ, 40 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ಮತ್ತು ಇತರೆ ವಸ್ತುಗಳು ಸೇರಿದಂತೆ ಒಟ್ಟು 4 ಕೋಟಿ 26 ಲಕ್ಷದ 48 ಸಾವಿರದ 405 ರೂ. ಮೌಲ್ಯದ ಆಸ್ತಿ ಇರುವುದು ಪತ್ತೆಯಾಗಿದೆ. ಈ ಕುರಿತು ಕೊಡಗು ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










