ಮಡಿಕೇರಿ ಡಿ.8 NEWS DESK : ಪ್ರೊ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ 69ನೇ ಪರಿನಿರ್ವಾಣ ದಿನಾಚರಣೆ ವಿರಾಜಪೇಟೆಯಲ್ಲಿ ನಡೆಯಿತು. ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕಿ ಗಾಯತ್ರಿ ನರಸಿಂಹ ಅವರು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಮೇಣದ ಬತ್ತಿಗಳನ್ನು ಹಚ್ಚಿ ಗೌರವ ನಮನ ಸಲ್ಲಿಸಿದರು. ನಂತರ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿರುವ ಸಂದೇಶಗಳಾದ ಶಿಕ್ಷಣ, ಸಂಘಟನೆ ಮತ್ತು ಹೋರಾಟವು ನಮ್ಮ ಗುರಿಯಾಗಬೇಕು. ಅವರ ಹೋರಾಟದ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕು, ಸಂವಿಧಾನದ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದರು. ವಿಶ್ವ ಮಾನವ ಡಾ.ಅಂಬೇಡ್ಕರ್ ಪರಿನಿರ್ವಾಣ 1956 ಡಿಸೆಂಬರ್ 6 ರಂದು ದೆಹಲಿಯಲ್ಲಿ ಆಯಿತು. ಪರಿನಿರ್ವಾಣ ಎಂದರೆ ಬೌದ್ಧ ಧರ್ಮದಲ್ಲಿ “ಸಂಪೂರ್ಣ ಮೋಕ್ಷ” ಎಂದರ್ಥ ಎಂದು ವಿವರಿಸಿದರು, ದಲಿತ ಸಂಘರ್ಷ ಸಮಿತಿಯ ಸದಸ್ಯರಾದ ವೈ.ಬಿ.ಗಣೇಶ್, ಲವ, ಗಣೇಶ್, ಜಯಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಿದರು.











