ಮಡಿಕೇರಿ ಡಿ.8 NEWS DESIK : ಇತ್ತೀಚೆಗೆ ದುಬೈಯಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ 15ನೇ ಬ್ರೈನೋಬ್ರೈನ್ ಸ್ಪರ್ಧೆಯಲ್ಲಿ ಮಡಿಕೇರಿಯ ಅನ್ವಿತ್ ಎಸ್. ಜೂನಿಯರ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ನಗರದ ಬ್ರೈನೋಬ್ರೈನ್ ಅಬಕಾಸ್ ಸಂಸ್ಥೆಯ ಮುಖ್ಯಸ್ಥರಾದ ಮಾಪಂಗಡ ಕವಿತಾ ಕರುಂಬಯ್ಯ ಅವರ ಬಳಿ ಅನ್ವಿತ್ ಎಸ್. ತರಬೇತಿ ಪಡೆಯುತ್ತಿದ್ದಾನೆ. ದುಬೈನ ಶೇಖ್ ರಶೀದ್ ಸಭಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಅನ್ವಿತ್ ಸೇರಿದಂತೆ ಕರ್ನಾಟಕ ರಾಜ್ಯದ ಆರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸುಮಾರು 16 ದೇಶಗಳ 1800 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮದೆನಾಡಿನ ಬಿಜಿಎಸ್ ಶಾಲೆಯ 3ನೇ ತರಗತಿಯ ವಿದ್ಯಾರ್ಥಿಯಾಗಿರುವ ಎಂಟು ವರ್ಷದ ಅನ್ವಿತ್ ಎಸ್. ಮದೆನಾಡು ಮದೆ ಮಹೇಶ್ವರ ಪದವಿಪೂರ್ವ ಕಾಲೇಜ್ ನ ಉಪನ್ಯಾಸಕ ಶ್ರೀನಿವಾಸ ವಿ. ಹಾಗೂ ಪವಿತ್ರ ಎಂ.ಎನ್ ದಂಪತಿಯ ಪುತ್ರ. ಬಹುಮಾನ ವಿತರಣಾ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಬ್ರೈನೋಬ್ರೈನ್ ಅಂತರಾಷ್ಟ್ರೀಯ ದುಬೈ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆನಂದ್ ಸುಬ್ರಮಣ್ಯಂ ಹಾಗೂ ತಾಂತ್ರಿಕ ನಿರ್ದೇಶಕ ಅರುಲ್ ಸುಬ್ರಹ್ಮಣ್ಯಂ ಅವರು ಅನ್ವಿತ್ ಸಾಧನೆಯನ್ನು ಶ್ಲಾಘಿಸಿದರು. ಮಾರ್ಗದರ್ಶಕಿ ಮಾಪಂಗಡ ಕವಿತಾ ಕರುಂಬಯ್ಯ ಅವರು ಮಾತನಾಡಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಅನ್ವಿತ್, ರಾಷ್ಟ್ರಮಟ್ಟ ಮತ್ತು ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿರುವುದು ಹೆಮ್ಮೆ ಎನಿಸಿದೆ. ತಂದೆ ತಾಯಿಗಳ ಸಹಕಾರದಿಂದ ಅನ್ವಿತ್ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದು, ಅಂತರಾಷ್ಟ್ರೀಯ ಮಟ್ಟದ ಯಶಸ್ಸು ಅವರ ಕುಟುಂಬದವರಿಗೆ ಸಲ್ಲಬೇಕು ಎಂದರು.












