ಮಡಿಕೇರಿ ಡಿ.22 NEWS DESK : ಕೊಡಗಿನ ಮೊಟ್ಟ ಮೊದಲ ಸೌಹಾರ್ದ ಸಹಕಾರಿ ‘ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತ’ ಶತಮಾನೋತ್ಸವದ ಸಂಭ್ರಮದಲ್ಲಿದೆ. ಇದರ ಅಂಗವಾಗಿ ಡಿ.25 ರಂದು ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಭ್ರಮದಿಂದ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಚೇತನ್ ಹೆಚ್.ಎಸ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸೌಹಾರ್ದ ಸಹಕಾರಿ ಶತಸಂಭ್ರಮದ ಕಾರ್ಯಕ್ರಮ ಜ.11 ರಂದು ನಗರದ ಗೌಡ ಸಮಾಜದಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದರು. ಡಿ.25 ರಂದು ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲೆಯ ಶಿಕ್ಷಕರಿಗೆ, ಸಂಘದ ಸದಸ್ಯರಿಗೆ ಹಾಗೂ ಕೊಡಗು ಜಿಲ್ಲಾ ಶಿಕ್ಷಣ ಇಲಾಖಾ ನೌಕರರಿಗೆ ಕ್ರೀಡಾಕೂಟ ನಡೆಯಲಿದೆ. ಪುರುಷರಿಗೆ ವಾಲಿಬಾಲ್, ಹಗ್ಗ ಜಗ್ಗಾಟ, ಕಬ್ಬಡ್ಡಿ, ಮಹಿಳೆಯರಿಗೆ ಹಗ್ಗ ಜಗ್ಗಾಟ ಮತ್ತು ಥ್ರೋಬಾಲ್. ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ 100 ಮೀಟರ್ ಓಟದ ಸ್ಪರ್ಧೆ, ನಡೆಯುವ ಸ್ಪರ್ಧೆ, ಮೂಸಿಕಲ್ ಚೇರ್, ಭಾರತದ ಗುಂಡು ಎಸೆತ ಮತ್ತು ವಿಷದ ಚೆಂಡು ಸ್ಪರ್ಧೆಯನ್ನು ಆಯೋಜಿಸಲಾಗಿದೆ. ನಂತರ ಸಾಂಸ್ಕೃತಿಕ ಸ್ಪರ್ಧೆ ನಡೆಯಲಿದ್ದು, ಜನಪದ ನೃತ್ಯ(ಗುಂಪು)-10 ಜನಕ್ಕೆ ಮೀರದಂತೆ, ಸಿನಿಮಾ ಹಾಡಿಗೆ ನೃತ್ಯ(ಗುಂಪು)-10 ಜನಕ್ಕೆ ಮೀರದಂತೆ, ಭಾವಗೀಎ ಮತ್ತು ಜಾನಪದ ಗೀತೆ(ವೈಯಕ್ತಿಕ), ಏಕಾಪಾತ್ರಾಭಿನಯ(ವೈಯಕ್ತಿಕ), ಮಹಿಳೆಯರಿಗೆ ಜನಪದ ಗೀತೆ(ಗುಂಪು), 10 ಮಂದಿ ಮೀರಬಾರದು. ನಿವೃತ್ತ ಶಿಕ್ಷಕರಿಗೆ ನಡೆಯುವ ಸ್ಪರ್ಧೆ, ಬಕೆಟ್‍ನಲ್ಲಿ ಬಾಲ್ ಹಾಕುವುದು ಮತ್ತು ವಿಷದ ಚೆಂಡು ಸ್ಪರ್ಧೆಗಳು ನಡೆಯಲಿವೆ. ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಪ್ರತ್ಯೇಕವಾಗಿ ‘ದೇಶದ ಆರ್ಥಿಕತೆಯ ಬೆಳೆವಣಿಗೆಯಲ್ಲಿ ಸಹಕಾರ ಮತ್ತು ಸೌಹಾರ್ದದ ಪಾತ್ರ’ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ನಗರದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ತಾಲ್ಲೂಕಿಗೆ ಒಂದು ಬಣ್ಣದಂತೆ ಟಿ-ಶರ್ಟ್ ಮತ್ತು ಕ್ಯಾಪ್ ನೀಡುವ ಉದ್ದೇಶ ಹೊಂದಲಾಗಿದೆ ಮತ್ತು ಊಟದ ವ್ಯವಸ್ಥೆ ಇರುತ್ತದೆ ಎಂದು ತಿಳಿಸಿದರು. ಕ್ರೀಡಾಕೂಟದ ಉದ್ಘಾಟನೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು, ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ಭೋಜೇಗೌಡ ಮತ್ತಿತರ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ ಎಂದರು. *ಶತಸಂಭ್ರಮ ಭವನ* ಶತಮಾನೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ಸಂಘದ ಗುರುಭವನ ಕಟ್ಟಡ ಇರುವ ಜಾಗದಲ್ಲಿ ರೂ.5 ಕೋಟಿ ವೆಚ್ಚದಲ್ಲಿ ‘ಶತಸಂಭ್ರಮ ಭವನ’ ನಿರ್ಮಾಣಕ್ಕೆ ಜ.11 ರಂದು ಶಿಲಾನ್ಯಾಸ ನೆರವೇರಿಸಲಾಗುವುದು. ಶಿಲಾನ್ಯಾಸ ಮತ್ತು ಶತಸಂಭ್ರಮ ಕಾರ್ಯಕ್ರಮಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಆಗಮಿಸಲಿದ್ದಾರೆ. ಕೊಡಗು ಜಿಲ್ಲಾ ಶಿಕ್ಷಕರಿಗೆ ಸಭೆ ಸಮಾರಂಭ ನಡೆಸಲು, ಜಿಲ್ಲೆ ಮತ್ತು ಹೊರ ಜಿಲ್ಲೆಯಿಂದ ಆಗಮಿಸುವ ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ರಿಯಾಯಿತಿ ದರದಲ್ಲಿ ವಸತಿ ವ್ಯವಸ್ಥೆ ಕಲ್ಪಿಸುವುದು ‘ಶತಸಂಭ್ರಮ ಭವನ’ ನಿರ್ಮಾಣದ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದರು. *ಶಿಕ್ಷಕರಿಗೆ ಹೆಮ್ಮೆ* ದೂರದೃಷ್ಟಿಯ ಚಿಂತಕ, ನಮ್ಮ ಸಹಕಾರಿಯ ಹರಿಕಾರ ತೇಲಪಂಡ.ಎಂ ಕಾರ್ಯಪ್ಪ ಅವರ ಪ್ರಯತ್ನದ ಫಲವಾಗಿ 1925 ಜೂ.23 ರಂದು ಸಂಘ ಸ್ಥಾಪನೆಗೊಂಡು ಶಿಕ್ಷಕರ ಬೇಕು ಬೇಡಿಕೆಗಳನ್ನು ಪೂರೈಸುತ್ತಾ ಬಂದಿದೆ. ಶಿಕ್ಷಕರ ಕಲ್ಯಾಣಕ್ಕೋಸ್ಕರ ಪ್ರಾರಂಭಗೊಂಡ ಸಂಘ ರಜತ ಮಹೋತ್ಸವ, ಸುವರ್ಣ ಮಹೋತ್ಸವ, ಅಮೃತ ಮಹೋತ್ಸವಗಳನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬಂದಿದೆ. ಇದೀಗ ಸಂಘ ಶತಮಾನೋತ್ಸವದ ಸಂಭ್ರಮದಲ್ಲಿರುವುದು ಕೊಡಗು ಜಿಲ್ಲಾ ಶಿಕ್ಷಣ ಇಲಾಖೆಗೆ ಹಾಗೂ ಶಿಕ್ಷಕರಿಗೆ ಸಂದ ದೊಡ್ಡ ಗೌರವವಾಗಿದೆ ಎಂದು ಚೇತನ್ ಹೆಚ್.ಎಸ್ ಹರ್ಷ ವ್ಯಕ್ತಪಡಿಸಿದರು. ಸ್ವಯತ್ತತೆ, ಸ್ವಯಂ ನಿಯಂತ್ರಣ, ಸ್ವಯಂ ಆಡಳಿತ ತತ್ವದಡಿ ಕರ್ನಾಟಕ ಸರಕಾರ ಜಾರಿಗೆ ತಂದ ಸೌಹಾರ್ದ ಕಾಯಿದೆಯಡಿ ನೋಂದಣಿಯಾದ ಮೊಟ್ಟಮೊದಲ ಸೌಹಾರ್ದ ಶಿಕ್ಷಕರ ಹೆಮ್ಮೆಯ ಸಂಸ್ಥೆಯಾಗಿ ಬೆಳೆದು ಬಂದಿದೆ. ಮಡಿಕೇರಿ ನಗರದಲ್ಲಿ 4 ಅಂತಸ್ತಿನ ಕಟ್ಟಡ ಹಾಗೂ ನಗರದ ಹೃದಯಭಾಗದಲ್ಲಿ 42 ಸೆಂಟು ಜಾಗದಲ್ಲಿ ಗುರುಭವನ ಕಟ್ಟಡದೊಂದಿಗೆ ಹೆಮ್ಮರವಾಗಿ ಬೆಳೆದಿರುವ ಸಂಸ್ಥೆ ಇದಾಗಿದೆ. ಸಂಘವು ರೂ.40 ಕೋಟಿ ವ್ಯವಹಾರ ನಡೆಸಿ, 18 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ಸುಮಾರು 15ಕೋಟಿ ರೂ.ಗಳನ್ನು ಸಾಲದ ರೂಪದಲ್ಲಿ ನೀಡುತ್ತಾ ಬರಲಾಗುತ್ತಿದ್ದು, 25ಲಕ್ಷ ರೂ. ಲಾಭವನ್ನು ಹೊಂದಿದೆ. ಶಿಕ್ಷಕರ ಆಶಾಕಿರಣವಾಗಿರುವ ಸಂಘ ಸೇವಾ ಮನೋಭಾವವನ್ನೇ ಗುರಿಯಾಗಿರಿಸಿಕೊಂಡಿದೆ. ಇದೇ ಕಾರಣದಿಂದ ಅತ್ಯಂತ ಕಡಿಮೆ ಬಡ್ಡಿ ದರ ಶೇ.11 ರಂತೆ ಸಾಲವನ್ನು ವಿತರಿಸುತ್ತಿದೆ. ವೈಯುಕ್ತಿಕ ಸಾಲ, ಗೃಹ ಸಾಲ, ವಾಹನ ಸಾಲ, ಚಿನ್ನಾಭರಣ ಸಾಲ ಮತ್ತು ಪಿಗ್ಮಿ ಮೇಲಿನ ಸಾಲ ನೀಡಲಾಗುತ್ತಿದೆ.
ಸಂಘದ ಈ ಯಶಸ್ಸಿಗೆ ಆಡಳಿತ ಮಂಡಳಿ, ಕಾರ್ಯನಿರ್ವಹಣಾಧಿಕಾರಿಗಳು, ಸಿಬ್ಬಂದಿಗಳು, ಸದಸ್ಯರು ಹಾಗೂ ಶಿಕ್ಷಕರ ಅವಿರತ ಶ್ರಮವೇ ಪ್ರಮುಖ ಕಾರಣವಾಗಿದೆ ಎಂದು ಚೇತನ್ ಹೆಚ್.ಎಸ್ ತಿಳಿಸಿದರು. ಡಿ.25 ಮತ್ತು ಜ.11 ರಂದು ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಸರ್ವ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಸಿಬ್ಬಂದಿಗಳು ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಹೆಚ್.ಆರ್.ಮುತ್ತಪ್ಪ, ನಿರ್ದೇಶಕರುಗಳಾದ ಪುದಿಯನೆರವನ ರೇವತಿ ರಮೇಶ್, ಹೆಚ್.ಎನ್.ಮಂಜುನಾಥ್, ಟಿ.ಕೆ.ಬಸವರಾಜ ಹಾಗೂ ಕಾರ್ಯನಿರ್ವಹಣಾಧಿಕಾರಿ ಎಸ್.ಸಿ.ನಟೇಶ ಉಪಸ್ಥಿತರಿದ್ದರು.











