ಮಡಿಕೇರಿ, NEWS DESK ಫೆ.14 : ಕೊಡವ ಸಾಹಿತ್ಯ, ಸಂಸ್ಕೃತಿ ಮತ್ತು ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ತಿಳಿಯಪಡಿಸಲು ‘ಕೊಡವ ಭವನ’ದಂತಹ ಯೋಜನೆಗಳು ಸಹಕಾರಿಯಾಗಲಿದೆ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ತಿಳಿಸಿದ್ದಾರೆ.
ಮಡಿಕೇರಿ ತಾಲ್ಲೂಕು ಅರೆಕಾಡು ಹೊಸ್ಕೇರಿ ಗ್ರಾಮದಲ್ಲಿ ಕೊಡವ ವೆಲ್‌ಫೇರ್ ಐಂಡ್ ರಿಕ್ರಿಯೇಷನ್ ಅಸೋಸಿಯೇಶನ್ ವತಿಯಿಂದ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಕಟ್ಟಡ ‘ಕೊಡವ ಭವನ’ ವನ್ನು ಉದ್ಘಾಟಿಸಿ ಶಾಸಕರು ಮಾತನಾಡಿದರು.
ಒಂದು ಭವನವು ಸ್ಥಳೀಯ ಕೊಡವ ಜನಾಂಗದವರ ಸಮ್ಮಿಲನಕ್ಕೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಹಾಗೂ ಪರಸ್ಪರ ವಿಚಾರ ವಿನಿಮಯಕ್ಕೆ ಸಹಕಾರಿಯಾಗಲಿದೆ. ಇದನ್ನು ಸಮಾಜದ ಬಂಧುಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ವೆಲ್‌ಫೇರ್ ಐಂಡ್ ರಿಕ್ರಿಯೇಷನ್ ಅಸೋಸಿಯೇಶನ್ ನ ಅಧ್ಯಕ್ಷ ಕುಕ್ಕೆರ ಜಯ ಚಿಣ್ಣಪ್ಪ ಅವರು ಎಲ್ಲರ ಸಹಕಾರದಿಂದ ‘ಕೊಡವ ಭವನ’ ನಿರ್ಮಾಣಗೊಂಡಿದೆ. ಈ ‘ಕೊಡವ ಭವನ’ ದಲ್ಲಿ ‘ಹೆಲ್ತ್ ಕ್ಲಬ್’ ನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಅಲ್ಲದೆ ಬ್ಯಾಡ್ಮಿಂಟನ್ ಕ್ರೀಡಾಂಗಣವನ್ನು ನಿರ್ಮಿಸಲಾಗಿದ್ದು, ಈ ಕ್ರೀಡಾಂಗಣಕ್ಕೆ ಸಿಂಥೆಟಿಕ್ ಟರ್ಫ್ ನ ಅಗತ್ಯವಿದೆ. ಈ ಎರಡೂ ಯೋಜನೆಗಳಿಗೆ ಜನಪ್ರತಿನಿಧಿಗಳು ಅಗತ್ಯ ಅನುದಾನವನ್ನು ಒದಗಿಸಿ ಕೊಡಬೇಕೆಂದು ಮನವಿ ಮಾಡಿದರು.

ಇದೇ ಸಂದರ್ಭ ಕೊಡವ ಪುಸ್ತಕ ಪತ್ತಾಯ ಸ್ಥಾಪನೆ ಕಾರ್ಯಕ್ರಮ ಕೂಡ ನಡೆಯಿತು.ವಿಧಾನ ಪರಿಷತ್ ಸದಸ್ಯರಾದ ಮಂಡೇಪಂಡ ಸುಜಾ ಕುಶಾಲಪ್ಪ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ, ಜಿಲ್ಲಾ ಗ್ಯಾರಂಟಿ ಯೋಜನಾ ಸಮಿತಿಯ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ, ಬೆಳೆಗಾರರಾದ ನಡಿಕೇರಿಯಂಡ ಪಿ.ಮೋಹನ್ ಮಾಚಯ್ಯ ಹಾಗೂ ಪ್ರಮುಖರು ಉಪಸ್ಥಿತರಿದ್ದರು.‘ಕೊಡವ ಭವನ’ ನಿರ್ಮಾಣಕ್ಕೆ ಸಹಕರಿಸಿದ ಪ್ರಮುಖರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.







