
ಮಡಿಕೇರಿ NEWS DESK ಫೆ.17 : ಕಾರ್ಮಿಕರ ಹಕ್ಕುಗಳನ್ನು ಕಡಿತಗೊಳಿಸಿ ಕಂಪೆನಿಗಳಿಗೆ ಹೆಚ್ಚಿನ ಸ್ವಾತಂತ್ರ‍್ಯ ನೀಡುವ ಸರಕಾರದ ಕ್ರಮ ಅಸಂವಿಧಾನಿಕವಾಗಿದ್ದು, ಇದರ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಕರ್ನಾಟಕ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆ ಹಲವು ನಿರ್ಣಯಗಳನ್ನು ತೆಗೆದುಕೊಂಡಿದೆ ಎಂದು ಎಸ್‌ಡಿಟಿಯು ಸಂಘಟನೆಯ ಕೊಡಗು ಜಿಲ್ಲಾಧ್ಯಕ್ಷ ಕೆ.ಹೆಚ್.ಅಣ್ಣ ಷರೀಫ್ ಹಾಗೂ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಜಾಕ್ ಎಂ.ಎ ತಿಳಿಸಿದ್ದಾರೆ.
ಭಾರತದಲ್ಲಿ ಹಿಂದಿನ ವ್ಯವಸ್ಥೆಯಲ್ಲಿ ಹಲವು ಕೇಂದ್ರ ಕಾರ್ಮಿಕ ಕಾಯ್ದೆಗಳು ಜಾರಿಯಲ್ಲಿದ್ದವು. ಅವುಗಳನ್ನು ಕೇಂದ್ರ ಸರಕಾರ ನಾಲ್ಕು ಕಾಯ್ದೆಗಳಾಗಿ ಮಾರ್ಪಡುಗೊಳಿಸಿದೆ. ಈ ಕಾನೂನುಗಳಿಂದ ಕಾರ್ಮಿಕರ ಹಕ್ಕುಗಳು ಕಡಿತಗೊಳ್ಳುವ ಸಾಧ್ಯತೆಗಳಿದೆ, ಕಂಪೆನಿಗಳಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಲಾಗಿದೆ. ಅನುಷ್ಠಾನದಲ್ಲಿಯೂ ಅಸ್ಪಷ್ಟತೆ ಕಂಡು ಬರುತ್ತಿದೆ. ಆದ್ದರಿಂದ ಈ ಹೊಸ ಕಾನೂನನ್ನು ರದ್ದುಗೊಳಿಸಿ ಹಿಂದಿನ ಕಾನೂನುಗಳನ್ನೇ ಸಮರ್ಪಕವಾಗಿ ಜಾರಿಗೊಳಿಸಬೇಕು.
ಕರ್ನಾಟಕ ರಾಜ್ಯದ ಗ್ರಾಮಾಂತರ ಪ್ರದೇಶಗಳಲ್ಲಿ ಅನೇಕ ಪದವೀಧರರು ಉತ್ತಮ ಶಿಕ್ಷಣ ಪಡೆದಿದ್ದರೂ, ತಮ್ಮ ಅರ್ಹತೆಗೆ ತಕ್ಕ ಉದ್ಯೋಗಾವಕಾಶಗಳ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚು ಇದ್ದರೂ, ಗ್ರಾಮಾಂತರ ಯುವ ಜನತೆಗೆ ಮಾಹಿತಿ ಕೊರತೆ, ಮಾರ್ಗದರ್ಶನದ ಅಭಾವ ಹಾಗೂ ಆರ್ಥಿಕ ಅಡಚಣೆಗಳಿಂದ ಅವಕಾಶಗಳು ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ಗ್ರಾಮಾಂತರ ಪ್ರದೇಶಗಳಲ್ಲೇ ವಿಶೇಷ ಉದ್ಯೋಗ ಮೇಳಗಳನ್ನು ಆಯೋಜಿಸಬೇಕು. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಮಕ್ಕಳಿಗೆ ಪದವಿಯವರೆಗೆ ಸರಕಾರ ಉಚಿತ ಶಿಕ್ಷಣ ನೀಡಬೇಕು ಎಂಬಿತ್ಯಾದಿ ಹಕ್ಕೊತ್ತಾಯಗಳ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಕೆ.ಹೆಚ್.ಅಣ್ಣ ಷರೀಫ್ ಹಾಗೂ ಅಬ್ದುಲ್ ರಜಾಕ್ ಎಂ.ಎ ಮಾಹಿತಿ ನೀಡಿದ್ದಾರೆ. ಎಸ್‌ಡಿಟಿಯು ಸಂಘಟನೆಯ ರಾಜ್ಯ ಸಂಚಾಲಕ ಅಥಾವುಲ್ಲಾ ಜೋಕಟ್ಟೆ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಫಾರೂಕು ತಮಿಳುನಾಡು, ರಾಜ್ಯ ಉಸ್ತುವಾರಿ ರಹೀಮ್ ಪಟೇಲ್, ಸಹ ಸಂಚಾಲಕ ಖಾದರ್ ಫರಂಗಿಪೇಟೆ, ಶಫಿ ರಾಯಚೂರು, ಸದಸ್ಯ ಅಬೂಬಕ್ಕರ್ ಮದ್ದ, ಇಮ್ರಾನ್ ಬೆಳಗಾವಿ, ಅಲ್ತಾಫ್ ಮೈಸೂರು, ಕೊಡಗು ಜಿಲ್ಲೆಯ ಪ್ರತಿನಿಧಿಗಳು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಸಭೆಯಲ್ಲಿ ಉಪಸ್ಥಿತರಿದ್ದರು ಎಂದು ತಿಳಿಸಿದ್ದಾರೆ.









