ಮಡಿಕೇರಿ, NEWS DESK ಫೆ.24 : ಮಡಿಕೇರಿ ಪ್ರವಾಸಿ ವಾಹನಗಳು ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ ಮತ್ತು ಪ್ರವಾಸಿಗರಿಂದ ಅಧಿಕ ದರ ಪಡೆಯುತ್ತಿಲ್ಲವೆಂದು ಮಡಿಕೇರಿ ಪ್ರವಾಸಿ ವಾಹನ ಮಾಲೀಕ ಚಾಲಕರ ಸಂಘ ಸ್ಪಷ್ಟಪಡಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಸಂತು ಕಾರ್ಯಪ್ಪ ವಿನಾಕಾರಣ ಕೆಲವರು ಪ್ರವಾಸಿ ವಾಹನಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ರವಾನಿಸುತ್ತಿದ್ದು, ಇದು ಖಂಡನೀಯ ಎಂದರು.

ಜೀಪ್ ಚಾಲಕರ ಸಂಘ ಮತ್ತು ಆಟೋ ಚಾಲಕರ ಸಂಘದ ಪ್ರಮುಖರೆನಿಸಿಕೊಂಡವರು ಪ್ರವಾಸಿ ವಾಹನಗಳ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಪ್ರವಾಸಿ ವಾಹನಗಳು ನಿಗಧಿತ ದರವನ್ನು ಮಾತ್ರ ಪ್ರವಾಸಿಗರಿಂದ ಪಡೆಯುತ್ತಿದ್ದು, ಅಧಿಕ ದರ ವಸೂಲಿ ಮಾಡುತ್ತಿಲ್ಲ. ಕೆಲವು ಜೀಪು ಚಾಲಕರು ಹಾಗೂ ಆಟೋ ಚಾಲಕರು ನಿಯಮ ಉಲ್ಲಂಘಿಸಿದಾಗ ಆಯಾ ಸಂಘಗಳ ಅಧ್ಯಕ್ಷರುಗಳು ಏನು ಕ್ರಮ ಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದರು. ಜಿಲ್ಲೆಯ ಪ್ರವಾಸೋದ್ಯಮದ ಬೆಳವಣಿಗೆಗೆ ಪ್ರವಾಸಿ ವಾಹನಗಳು ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ ಎಂದು ತಿಳಿಸಿದರು.
*ಬೇಡಿಕೆ*
ಜಿಲ್ಲೆಯ ವಿವಿಧ ಪ್ರವಾಸಿತಾಣಗಳಿಗೆ ತೆರಳುವ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಬೇಕು ಮತ್ತು ಪ್ರಮುಖ ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕು. ಮಡಿಕೇರಿ ನಗರದ ಹಳೆಯ ಖಾಸಗಿ ಬಸ್ ನಿಲ್ದಾಣದ ಬಳಿ ನಗರಸಭೆ ವತಿಯಿಂದ ಸುಸಜ್ಜಿತ ಶೌಚಾಲಯ ನಿರ್ಮಿಸಬೇಕೆಂದು ಸಂತು ಕಾರ್ಯಪ್ಪ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಅರಸು ಮುಕ್ಕಾಟಿ, ಖಜಾಂಚಿ ಶಬೀರ್ ಶೇಕ್, ಕಾರ್ಯದರ್ಶಿ ನವೀನ್ ಕುಮಾರ್, ಪ್ರಮುಖರಾದ ತೆಕ್ಕಡ ಗಣೇಶ್ ಹಾಗೂ ಸತೀಶ್ ಉಪಸ್ಥಿತರಿದ್ದರು.







