ಮಡಿಕೇರಿ ಫೆ.24 : ಗುತ್ತಿಗೆದಾರರಿಗೆ ಪೂರ್ಣಗೊಳಿಸಿದ ಕಾಮಗಾರಿಗಳಿಗೆ ನೀಡಲು ಬಾಕಿ ಇರುವ ಹಣವನ್ನು ಸರಕಾರ ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಮಾ.6ರಂದು ರಾಜ್ಯವ್ಯಾಪಿ ಕಾಮಗಾರಿ ಸ್ಥಗಿತಗೊಳಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕೊಡಗು ಜಿಲ್ಲಾ ಲೋಕೋಪಯೋಗಿ ಗುತ್ತಿಗೆದಾರರ ಸಂಘ ತಿಳಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಕಿಮ್ಮುಡಿರ ರವಿ ಚಂಗಪ್ಪ ಅವರು ರಾಜ್ಯ ಸರಕಾರ ಗುತ್ತಿಗೆದಾರರಿಗೆ ಸುಮಾರು 37 ಸಾವಿರ ಕೋಟಿ ರೂ.ಗಳನ್ನು ನೀಡಲು ಬಾಕಿ ಇದೆ. ಕೊಡಗು ಜಿಲ್ಲೆಯ ಗುತ್ತಿಗೆದಾರರಿಗೆ 195.26 ಕೋಟಿ ರೂ. ನೀಡಬೇಕಾಗಿದೆ. ಕಳೆದ ಮೂರು ವರ್ಷಗಳಿಂದ ಹಣ ನೀಡದೆ ಬಾಕಿ ಉಳಿಸಿಕೊಂಡಿದ್ದು, ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಪ್ರತಿಭಟನೆಯ ನಿರ್ಧಾರ ಕೈಗೊಂಡಿದ್ದು, ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಗುತ್ತಿಗೆದಾರರು ಬೆಳಿಗ್ಗೆ 10ಗಂಟೆಗೆ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಕೊಡಗಿನಲ್ಲಿ ಕೈಗೊಂಡ ಮಳೆಹಾನಿ ಕಾಮಗಾರಿ 18 ಕೋಟಿ ರೂ., ಟಾಸ್ಕ್ ಫೋರ್ಸ್ 2.39 ಕೋಟಿ, ವಿಶೇಷ ಅನುದಾನದ ಕಾಮಗಾರಿ 12.87 ಕೋಟಿ, ಎನ್‌ಡಿಆರ್‌ಎಫ್ 8 ಕೋಟಿ, ಸಣ್ಣ ನೀರಾವರಿ ಇಲಾಖೆ 55 ಕೋಟಿ ಹಾಗೂ ಲೋಕೋಪಯೋಗಿ ಇಲಾಖೆ ಕಾಮಗಾರಿ 99 ಕೋಟಿ ರೂ. ಸೇರಿ ಒಟ್ಟು 195.26 ಕೋಟಿ ರೂ. ಹಣ ಬರಲು ಬಾಕಿ ಇದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಖಜಾಂಚಿ ರವೀಂದ್ರ ರೈ, ಕಾರ್ಯದರ್ಶಿಗಳಾದ ಲಾರೆನ್ಸ್, ಅರುಣ್ ಕುಮಾರ್, ಉಪಾಧ್ಯಕ್ಷ ರಾಜೀವಲೋಚನ ಹಾಗೂ ಸಂಘಟನಾ ಕಾರ್ಯದರ್ಶಿ ಕೆ.ಬಾಬು ಉಪಸ್ಥಿತರಿದ್ದರು.
*ಬಾಕಿ ಹಣ ಪಾವತಿಗೆ ಕೊಡಗು ಜಿಲ್ಲಾ ಲೋಕೋಪಯೋಗಿ ಗುತ್ತಿಗೆದಾರರ ಸಂಘ ಆಗ್ರಹ : ಮಾ.6 ರಂದು ಬೃಹತ್ ಪ್ರತಿಭಟನೆ*
1 Min Read
Previous Article*ರೈತರ ಗಮನಕ್ಕೆ*
Next Article *ಫೆ.25 ರಂದು ಸಂಸದರಿಂದ ರಕ್ಷಣಾ ತಡೆಗೋಡೆಗಳ ಭೂಮಿ ಪೂಜೆ*







