
ಮಡಿಕೇರಿ NEWS DESK ಜೂ.17 : ಈವಿ ಪವರ್ ಪ್ಲಸ್ ಬಸ್‌ನಲ್ಲಿ ಅಗತ್ಯ ಸೇವೆಯನ್ನು ಒದಗಿಸದ ಕೆಎಸ್‌ಆರ್‌ಟಿಸಿಗೆ ಬಡ್ಡಿ ಸಹಿತ 13 ಸಾವಿರ ರೂ. ಪಾವತಿಸುವಂತೆ ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ. ಮಡಿಕೇರಿ ತಾಲ್ಲೂಕಿನ ಬಿಳಿಗೇರಿ ಗ್ರಾಮದ ನಿವಾಸಿ ಸಚ್ಚಿತ್ ಕೆ.ಹೆಚ್ ಎಂಬುವವರು ಕಳೆದ 2025ರ ನವೆಂಬರ್ 6 ರಂದು ಮಡಿಕೇರಿಯಿಂದ ಬೆಂಗಳೂರಿಗೆ ಕೆಎಸ್‌ಆರ್‌ಟಿಸಿಯ ಈವಿ ಪವರ್ ಪ್ಲಸ್ ಬಸ್‌ನಲ್ಲಿ ಪ್ರಯಾಣಿಸಿದ್ದರು. ಈ ಪ್ರಯಾಣದ ಸಂದರ್ಭ ಮಾರ್ಗದ ಮಧ್ಯ ಬಸ್ ನ ಹವಾ ನಿಯಂತ್ರಣ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಯಿಸದೆ ಸಚ್ಚಿತ್ ತೊಂದರೆ ಅನುಭವಿಸಿದ್ದರು. ಈ ಬಗ್ಗೆ ಬಸ್ಸಿನ ನಿರ್ವಾಹಕರಿಗೆ ಮಹಿತಿ ನೀಡಿದರೂ ಸಹ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಸದರಿ ಬಸ್‌ನಲ್ಲಿ ಕಿಟಕಿ ತೆಗೆಯುವ ವ್ಯವಸ್ಥೆ ಕೂಡ ಇಲ್ಲದಿರುವುದರಿಂದ ಸಚ್ಚಿತ್ ಸಂಕಷ್ಟಕ್ಕೆ ಒಳಗಾಗಿದ್ದರು. ಈ ಬಗ್ಗೆ ಸಚ್ಚಿತ್ ಅವರು ಪರಿಹಾರ ಕೋರಿ ಸಲ್ಲಿಸಿದ ದೂರಿನ ಮೇರೆ ವಿಚಾರಣೆ ನಡೆಸಿದ ಕೊಡಗಿನ ಜಿಲ್ಲಾ ಗ್ರಾಹಕರ ಆಯೋಗದ ಪ್ರಬಾರ ಅಧ್ಯಕ್ಷರಾದ ಡಾ.ರೇಣುಕಾಂಬ.ಸಿ ಹಾಗೂ ಸದಸ್ಯರಾದ ಗೌರಮ್ಮಣ್ಣಿ ಅವರು ವಿಚಾರಣೆ ನಡೆಸಿದರು.
ಎಸಿ ಬಸ್ ಸೌಲಭ್ಯಕ್ಕಾಗಿ ಮುಂಗಡವಾಗಿ ತೆರಿಗೆ ಒಳಗೊಂಡ ಟಿಕೆಟ್ ದರ ಪಾವತಿಸಿ ಕಾಯ್ದಿರಿಸಿದ ಮೇಲೆ ಎಸಿ ಕೆಲಸ ಮಾಡುತ್ತಿಲ್ಲ ಎಂದಾಗಿದ್ದಲ್ಲಿ, ಮೈಸೂರು ಬಸ್ ನಿಲ್ದಾಣದಲ್ಲಿ ಮತ್ತೊಂದು ಬಸ್ಸಿನಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡುವುದು ನಿಗಮದವರ ಜವಾಬ್ದಾರಿಯಾಗಿತ್ತು. ಆದರೆ, ಇದನ್ನು ಮಾಡದಿರುವ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿಯು ಒಟ್ಟು 13 ಸಾವಿರ ರೂ.ಗಳನ್ನು ಮತ್ತು ಶೇ.9ರ ಬಡ್ಡಿಯನ್ನು ಪರಿಹಾರವಾಗಿ ಪಾವತಿಸುವಂತೆ ಆಯೋಗ ಆದೇಶ ನೀಡಿದೆ.








