
ಮಡಿಕೇರಿ NEWS DESK ಜೂ.23 : ಲವ್ ಜಿಹಾದ್ ಮತ್ತು ಮತಾಂತರ ಪ್ರಕರಣಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಹಿಂದೂ ಸುರಕ್ಷಾ ಸಮಿತಿ ವತಿಯಿಂದ ಜೂ.30 ರಂದು ಕುಶಾಲನಗರದಲ್ಲಿ ಬೃಹತ್ ಜನಜಾಗೃತಿ ಜನಾಂದೋಲನ ನಡೆಯಲಿದೆ ಎಂದು ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಂಯೋಜಕ ಬೋಜೇಗೌಡ ಅವರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಜನಾಂದೋಲನಕ್ಕೆ ಹಿಂದೂ ಜಾಗರಣಾ ವೇದಿಕೆ ಸಂಪೂರ್ಣ ಬೆಂಬಲವನ್ನು ನೀಡಲಿದೆ ಎಂದರು. ಕುಶಾಲನಗರದ ಹಿಂದೂ ಮಹಿಳೆ ಹಾಗೂ ಆಕೆಯ ಮಗನನ್ನು ಮತಾಂತರ ಮಾಡಲಾಗಿದೆ. ಪೊಲೀಸ್ ಇಲಾಖೆ ಈ ಸಂಬಂಧ ಎರಡು ಮಳಿಗೆೆಗಳನ್ನು ಮುಚ್ಚಿರುವುದನ್ನು ಹೊರತು ಪಡಿಸಿದರೆ ಸಮಗ್ರ ತನಿಖೆಗೆ ಮುಂದಾಗಿಲ್ಲವೆಂದು ಆರೋಪಿಸಿದರು. ಈ ಹಿಂದೆ ಗುಡ್ಡೆಹೊಸೂರು ವಿಭಾಗದ ಹಿಂದೂ ಮಹಿಳೆಯೊಬ್ಬರು ಲವ್ ಜಿಹಾದ್ ಗೆ ಸಿಲುಕಿ ಮತಾಂತರಗೊಂಡಿದ್ದಳು. ಬಳಿಕ ಎನ್‌ಐಎ ತನಿಖೆಯೊಂದರ ಸಂದರ್ಭ ಮಹಿಳೆ ಅಂತರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು. ಲವ್ ಜಿಹಾದ್ ಮತ್ತು ಮತಾಂತರಗಳ ಬಗ್ಗೆ ಹಿಂದೂ ಸಮಾಜ ಮೊದಲು ಜಾಗೃತವಾಗಬೇಕೆಂದು ಕರೆ ನೀಡಿದರು. ಹಿಂದೂ ಜಾಗರಣಾ ವೇದಿಕೆಯ ಪ್ರಾಂತ ಕಾರ್ಯಕಾರಿಣಿ ಸದಸ್ಯ ಕುಕ್ಕೇರ ಅಜಿತ್ ಅವರು ಮಾತನಾಡಿ, ಜೂ.30 ರಂದು ಬೆಳಗ್ಗೆ 10.30 ಗಂಟೆಗೆ ನಿಸರ್ಗಧಾಮದ ಬಳಿಯಿಂದ ಕುಶಾಲನಗರದ ಗಣಪತಿ ದೇವಸ್ಥಾನದ ಬಳಿಯ ಕಾರು ನಿಲ್ದಾಣದವರೆಗೆ ಬೃಹತ್ ಜನಜಾಗೃತಿ ಮೆರವಣಿಗೆ ಸಾಗಲಿದೆ. ನಂತರ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. ನಿಸರ್ಗಧಾಮದ ಮಳಿಗೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆ ಮತ್ತು ಆಕೆಯ ಮಗನನ್ನು ಕೇರಳದ ಮಲಪ್ಪುರಂನಲ್ಲಿ ಮತಾಂತರಗೊಳಿಸಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಮತಾಂತರಕ್ಕೆ ಕಾರಣರಾಗಿರುವ ಪ್ರಮುಖರನ್ನು ತನಿಖೆಗೆ ಒಳಪಡಿಸಬೇಕು. ಮತಾಂತರಗಳ ಹಿಂದಿರುವ ಶಕ್ತಿಗಳನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸುವ ಕಾರ್ಯ ಮಾಡಬೇಕು. ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗೋಹತ್ಯೆಗೆ ಪೂರ್ಣವಿರಾಮ ಹಾಕಬೇಕು, ಮತಾಂತರ ತಡೆಗಟ್ಟಬೇಕು, ಅಕ್ರಮ ಬಾಂಗ್ಲಾ ದೇಶಿಗರನ್ನು ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಬೀದಿಗಿಳಿದು ಹೋರಾಟ ನಡೆಸಲು ಹಿಂದೇಟು ಹಾಕುವುದಿಲ್ಲವೆಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಹಿಂದೂ ಜಾಗರಣಾ ಸಮಿತಿಯ ಜಿಲ್ಲಾ ಸದಸ್ಯ ಶಾಂತೆಯಂಡ ತಿಮ್ಮಯ್ಯ, ಪ್ರಚಾರ ಪ್ರಮುಖ್ ಭುವನ್ ಮೇಕೇರಿ, ತಾಲ್ಲೂಕು ಸಂಯೋಜಕ ಅಪ್ಪು ಬಾಲಕೃಷ್ಣ ರೈ ಹಾಗೂ ಜಿಲ್ಲಾ ಸದಸ್ಯ ಸುನಿಲ್ ಮಾದಾಪುರ ಉಪಸ್ಥಿತರಿದ್ದರು.









