
ಮಡಿಕೇರಿ NEWS DESK ಜೂ.29 : ಸಮಾಜದ ಸ್ವಾಸ್ಥ್ಯ ಮತ್ತು ಸಾಮರಸ್ಯವನ್ನು ಕದಡುತ್ತಿರುವ ಮತಾಂತರ ಚಟುವಟಿಕೆ ಸಾಮಾಜಿಕ ಪಿಡುಗಾಗಿ ಮಾರ್ಪಟ್ಟಿದ್ದು, ಇದರ ನಿರ್ಮೂಲನೆಗೆ ಕೇಂದ್ರ ಸರಕಾರ ಕಠಿಣ ಕಾನೂನು ಜಾರಿಗೆ ತರಬೇಕೆಂದು ಬಿಜೆಪಿ ಎಸ್‌ಟಿ ಮೋರ್ಚಾದ ಕೊಡಗು ಜಿಲ್ಲಾಧ್ಯಕ್ಷ ಎಂ.ಎA.ಪರಮೇಶ್ವರ ಆಗ್ರಹಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕುಶಾಲನಗರ ವ್ಯಾಪ್ತಿಯಲ್ಲಿ ಮಹಿಳೆ ಹಾಗೂ ಆಕೆಯ ಪುತ್ರನನ್ನು ಮತಾಂತರ ಮಾಡಿರುವ ಪ್ರಕರಣ ಹೇಯ ಕೃತ್ಯವಾಗಿದ್ದು, ಇದನ್ನು ತೀವ್ರವಾಗಿ ಖಂಡಿಸುವುದಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂದೂ ಸಂಘಟನೆಗಳ ವತಿಯಿಂದ ಜೂ.30 ರಂದು ಕುಶಾಲನಗರದಲ್ಲಿ ನಡೆಯುವ ಜನಾಂದೋಲನ ಜಾಗೃತಿ ಸಮಾವೇಶಕ್ಕೆ ಎಸ್‌ಟಿ ಮೋರ್ಚಾ ಸಂಪೂರ್ಣ ಬೆಂಬಲವನ್ನು ನೀಡಲಿದೆ. ಅಲ್ಲದೆ ಮತಾಂತರ ಪಿಡುಗಿನ ನಿರ್ಮೂಲನೆಗೆ ಯಾವುದೇ ಹೋರಾಟಕ್ಕೂ ಸಿದ್ಧವಿದೆ ಎಂದು ತಿಳಿಸಿದ್ದಾರೆ. ಶಾಂತಿ, ಸೌಹಾರ್ದತೆಗೆ ಹೆಸರಾಗಿರುವ ಕೊಡಗು ಜಿಲ್ಲೆಯಲ್ಲಿ ಎಲ್ಲಾ ಜಾತಿ, ಧರ್ಮದವರು ಒಗ್ಗಟ್ಟಿನಿಂದ ಜೀವನ ಸಾಗಿಸುತ್ತಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಮತಾಂತರ ಚಟುವಟಿಕೆ ವ್ಯಾಪಕವಾಗುತ್ತಿದ್ದು, ಇದು ಅಶಾಂತಿಗೆ ಕಾರಣವಾಗುತ್ತಿದೆ. ಕಳೆದ ವರ್ಷ ದಕ್ಷಿಣ ಕೊಡಗಿನ ಮನೆಯೊಂದರಲ್ಲಿ ಕ್ರೈಸ್ತ ಧರ್ಮದ ಪ್ರಾರ್ಥನೆ ನಡೆಯುತ್ತಿತ್ತು. ಇತ್ತೀಚೆಗೆ ಸುಂಟಿಕೊಪ್ಪ ಸಮೀಪ ನಿಯಮ ಬಾಹಿರ ಚರ್ಚ್ ಉದ್ಘಾಟನೆಗೆ ಸಿದ್ಧವಾಗಿತ್ತು. ಕೆಲವೇ ದಿನಗಳ ಹಿಂದೆ ಕುಶಾಲನಗರದ ಮಹಿಳೆ ಹಾಗೂ ಆಕೆಯ ಪುತ್ರ ನಾಪತ್ತೆಯಾಗಿ ಮತಾಂತರಗೊoಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಜಿಲ್ಲೆಯಲ್ಲಿ ಕೆಲವು ಪ್ರಕರಣಗಳು ಮಾತ್ರ ಬಯಲಾಗುತ್ತಿದೆ, ಆದರೆ ನಿಗೂಢವಾಗಿ ವ್ಯಾಪಕವಾಗಿ ನಡೆಯುತ್ತಿರುವ ಮತಾಂತರ ಪ್ರಕ್ರಿಯೆ ಆತಂಕವನ್ನು ಸೃಷ್ಟಿಸಿದೆ. ಮತಾಂತರಿ ದೇಶದ್ರೋಹಿಗಳು ಹಿಂದೂ ಯುವತಿಯರು, ಮಹಿಳೆಯರು ಹಾಗೂ ಆದಿವಾಸಿ ಜನಾಂಗದ ಮುಗ್ಧರನ್ನು ಗುರಿ ಮಾಡಿ ತಮ್ಮ ಕಾರ್ಯತಂತ್ರವನ್ನು ರೂಪಿಸುತ್ತಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಕೆಲವು ಕಿಡಿಗೇಡಿಗಳು ತಮ್ಮ ವ್ಯವಹಾರ ಸಂಸ್ಥೆಗಳಲ್ಲಿ ಹಿಂದೂಗಳಿಗೆ ಉದ್ಯೋಗವನ್ನು ನೀಡಿ, ನಂತರ ಮನಪರಿವರ್ತಿಸುವ ಮೂಲಕ ಆಮಿಷಗಳನ್ನೊಡ್ಡಿ ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ. ವ್ಯಾಸಂಗ ಮಾಡುತ್ತಿರುವ ಯುವತಿಯರನ್ನು ದುರುಪಯೋಗ ಪಡಿಸಿಕೊಂಡು ಬಲವಂತದ ಮತಾಂತರಕ್ಕೆ ಪ್ರೇರಣೆ ನೀಡುವ ಪ್ರಯತ್ನಗಳು ಕೂಡ ನಡೆಯುತ್ತಿದೆ ಎಂದು ಎಂ.ಎಂ.ಪರಮೇಶ್ವರ ಆರೋಪಿಸಿದ್ದಾರೆ. ಪ್ರತಿಯೊಬ್ಬರಿಗೂ ತಮ್ಮ ತಮ್ಮ ಧರ್ಮವೇ ದೊಡ್ಡದಾಗಿರುತ್ತದೆ, ಯಾವುದೇ ಧರ್ಮ, ಜಾತಿ, ಮತಗಳನ್ನು ಪರಸ್ಪರ ಗೌರವಿಸಬೇಕೆ ಹೊರತು ಧರ್ಮನಾಶದ ಕುತಂತ್ರ ಮಾಡಬಾರದು. ಮತಾಂತರ ಎನ್ನುವುದು ಒಂದು ದೇಶದ್ರೋಹಿ ಕೃತ್ಯವಾಗಿದೆ, ಹಿಂದೂ ಯುವತಿಯರು ಹಾಗೂ ಮಹಿಳೆಯರನ್ನು ಗುರಿ ಮಾಡಿ ಮತಾಂತರದಲ್ಲಿ ತೊಡಗಿರುವ ದುಷ್ಕರ್ಮಿಗಳ ನಿಗೂಢ ಜಾಲವನ್ನು ಕೇಂದ್ರ ಸರಕಾರ ಭೇದಿಸಬೇಕಾಗಿದೆ. ಇದಕ್ಕಾಗಿ ವಿಶೇಷ ಕ್ಷಿಪ್ರ ತನಿಖಾ ತಂಡವನ್ನು ರಚಿಸಬೇಕು, ದೇಶದ ಸುರಕ್ಷತೆಯ ದೃಷ್ಟಿಯಿಂದ ಮತಾಂತರ ಪಿಡುಗನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.
ಹಿಂದೂ ಸಮೂಹ ಕೂಡ ಮತಾಂತರಿಗಳ ವಿರುದ್ಧ ಜಾಗೃತಗೊಳ್ಳಬೇಕಾಗಿದೆ. ಜೇನಿನಂತಹ ಮಾತಿಗೆ ಮರುಳಾಗಿ ಜೀವನ ಹಾಳು ಮಾಡಿಕೊಳ್ಳುವ ಬದಲು ದುಷ್ಕರ್ಮಿಗಳಿಂದ ದೂರವೇ ಉಳಿಯಬೇಕು. ಮತಾಂತರಗೊoಡ ಹಿಂದೂ ಯುವತಿಯರು ಇಂದು ಅತಂತ್ರರಾಗಿದ್ದಾರೆ, ಬೀದಿಗೆ ಬಿದ್ದವರನ್ನು ಯಾರೂ ರಕ್ಷಿಸದ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಹಿಂದೂ ಪೋಷಕರು ಹಾಗೂ ಮಕ್ಕಳು ಎಚ್ಚರಿಕೆಯ ಹೆಜ್ಜೆಯನ್ನು ಇರಿಸಬೇಕು ಎಂದು ಎಂ.ಎಂ.ಪರಮೇಶ್ವರ ಮನವಿ ಮಾಡಿದ್ದಾರೆ.








