
ಮಡಿಕೇರಿ NEWS DESK ಜು.9 : ಬಾಡಗರಕೇರಿಯ ಇತಿಹಾಸ ಪ್ರಸಿದ್ಧ ಶ್ರೀ ಮೃತ್ಯುಂಜಯ ಕ್ಷೇತ್ರದ ನೂತನ ಗರ್ಭಗುಡಿಯಲ್ಲಿ ಕಳೆದ 4 ದಿನಗಳಿಂದ ನಡೆಯುತ್ತಿದ್ದ ದೇವರ ಬಿಂಬ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಇಂದು ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು. ಗಣಪತಿ ಹೋಮ, ತತ್ವಹೋಮ, ತತ್ವ ಕಲಶ ಪೂಜೆ, ಸಿಂಹಲಗ್ನದ ಶುಭ ಮುಹೂರ್ತದಲ್ಲಿ ಶ್ರೀ ಮೃತ್ಯುಂಜಯ ದೇವರ ಬಿಂಬ ಪ್ರತಿಷ್ಠೆ, ಅಷ್ಟಬಂಧ ಲೇಪನ, ಜೀವಕಲಶಾಭಿಷೇಕ, ಶಿಖರ ಪ್ರತಿಷ್ಠೆ ಮುಂದುವರಿದು ತತ್ವ ಕಲಶಾಭಿಷೇಕ ನಡೆಯಿತು. ಮಹಾಪೂಜೆ, ಮಂತ್ರಾಕ್ಷತೆಯ ನಂತರ ಭಕ್ತರಿಗೆ ಅನ್ನಸಂತರ್ಪಣೆಯಾಯಿತು. ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ಬಾಡಗರಕೇರಿ ಗ್ರಾಮದಲ್ಲಿರುವ ಶ್ರೀ ಮೃತ್ಯುಂಜಯ ದೇವಸ್ಥಾನ ಐತಿಹಾಸಿಕವಾಗಿದ್ದು, ನೂರಾರು ವರ್ಷಗಳ ಹಿನ್ನೆಲೆ ಹೊಂದಿದೆ. ಸುಮಾರು 1.20 ಕೋಟಿ ರೂ. ವೆಚ್ಚದ ಕಾಮಗಾರಿ ಪೂರ್ಣಗೊಂಡಿದ್ದು, ಗರ್ಭಗುಡಿ, ತೀರ್ಥಮಂಟಪ ಹಾಗೂ ಗಣಪತಿ ಗುಡಿಯ ಜೀರ್ಣೋದ್ಧಾರವಾಗಿದೆ.











