
ಮಡಿಕೇರಿ NEWS DESK ಜು.11 : ಹೇಮಾವತಿ ನದಿಯ ಹಿನ್ನೀರಿನಲ್ಲಿ ಗುರುವಾರ ರಾತ್ರಿ ಮೀನು ಹಿಡಿಯಲು ತೆರಳಿ ನಾಪತ್ತೆಯಾಗಿದ್ದ ಕೊಡ್ಲಿಪೇಟೆ ಸಮೀಪದ ಜನಾರ್ಧನ ಹಳ್ಳಿಯ ನೀರುಗುಂದ ಗ್ರಾಮದ ನಿವಾಸಿಗಳಾದ ನಾಗರಾಜ್(45) ಮತ್ತು ಶಿವರಾಜ್(50) ಅವರ ಪತ್ತೆ ಕಾರ್ಯ ಚುರುಕುಗೊಂಡಿದೆ.
ಶುಕ್ರವಾರ ಸಂಜೆಯವರೆಗೆ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಪೊಲೀಸರಿಗೆ ಯಾವುದೇ ಕುರುಹುಗಳು ಕಂಡು ಬಂದಿಲ್ಲ. ಈ ಹಿನ್ನೆಲೆಯಲ್ಲಿ ಶನಿವಾರ ಗ್ರಾಮಸ್ಥರು ತೆಪ್ಪದ ಸಹಾಯದಿಂದ ಹಿನ್ನೀರಿನ 30 ಎಕರೆ ಪ್ರದೇಶದಲ್ಲಿ ಶೋಧ ನಡೆಸಿದರೂ ಪ್ರಯೋಜನವಾಗಿಲ್ಲ. ಶನಿವಾರವೂ ಶನಿವಾರಸಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಮ್ಮ ಗ್ರಾಮದ ಇಬ್ಬರು ವ್ಯಕ್ತಿಗಳು ನಾಪತ್ತೆಯಾಗಿರುವ ಕಾರಣ ಗ್ರಾಮಸ್ಥರು ಕೂಡ ನದಿ ದಡದಲ್ಲಿ ಕಾದು ಕುಳಿತ್ತಿದ್ದ ದೃಶ್ಯಗಳು ಕಂಡು ಬಂತು. ಈ ಕುರಿತು ಮಾತನಾಡಿದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಜಯರಾಜ್, ಮೀನು ಹಿಡಿಯಲು ತೆರಳಿ ನಾಪತ್ತೆಯಾಗಿರುವ ಇಬ್ಬರು ವ್ಯಕ್ತಿಗಳ ಕುಟುಂಬಗಳು ತೀರಾ ಬಡತನದಲ್ಲಿದ್ದು, ಅವರಿಗೆ ದಿಕ್ಕೇ ತೋಚದಂತಾಗಿದೆ. ಜಿಲ್ಲಾಡಳಿತ ನುರಿತ ಈಜುಗಾರರು ಹಾಗೂ ಸಾಧ್ಯವಾದಲ್ಲಿ ಎನ್‌ಡಿಆರ್‌ಎಫ್ ತಂಡದ ಮೂಲಕ ಕಾರ್ಯಾಚರಣೆ ನಡೆಸಿ ನಾಪತ್ತೆಯಾದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಸಹಕಾರ ನೀಡಬೇಕೆಂದು ಮನವಿ ಮಾಡಿದರು.









