ಸೋಮವಾರಪೇಟೆ NEWS DESK ಜು.14 : ತಾಲೂಕಿನ ಕಾಂಡನಕೊಲ್ಲಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ಸೇರಿದ ಕಾಫಿ ತೋಟಕ್ಕೆ ಐದು ಕಾಡಾನೆಗಳ ಹಿಂಡು ನುಗ್ಗಿ ವ್ಯಾಪಕ ಹಾನಿ ಉಂಟುಮಾಡಿದೆ. ಮoಗಳವಾರ ತಡರಾತ್ರಿ ತೋಟಕ್ಕೆ ಲಗ್ಗೆಯಿಟ್ಟ ಕಾಡಾನೆಗಳು ಮಾಜಿ ಸಚಿವರ ತೋಟದ ಪ್ರವೇಶ ದ್ವಾರದ ಗೇಟ್‌ಗಳನ್ನು ಧ್ವಂಸಗೊಳಿಸಿವೆ. ಗೇಟ್‌ನ ಕಬ್ಬಿಣದ ಕಂಬಗಳು ಹಾಗೂ ಪಿಲ್ಲರ್‌ಗಳನ್ನು ಉರುಳಿಸಿ, ಕಬ್ಬಿಣದ ಗೇಟ್‌ಗಳನ್ನು ತುಳಿದು ಒಳನುಗ್ಗಿದ ಆನೆಗಳು ಹಲವು ಕಾಫಿ ಗಿಡಗಳನ್ನು ಕಿತ್ತು ನಾಶಪಡಿಸಿವೆ. ಇದರಿಂದ ತೋಟಕ್ಕೆ ಗಮನಾರ್ಹ ಪ್ರಮಾಣದ ಹಾನಿಯಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಂಡನಕೊಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಕಾಡಾನೆಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆತಂಕಗೊAಡಿದ್ದಾರೆ. ರಾತ್ರಿ ವೇಳೆಯಲ್ಲಿ ಹೊರಗಡೆ ಓಡಾಡಲು ಭಯದ ವಾತಾವರಣ ನಿರ್ಮಾಣವಾಗಿದ್ದು, ಅರಣ್ಯ ಇಲಾಖೆ ಕಾಡಾನೆಗಳನ್ನು ಕಾಡಿಗೆ ಮರಳಿಸುವ ಹಾಗೂ ಶಾಶ್ವತ ನಿಯಂತ್ರಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.








