
ವಿರಾಜಪೇಟೆ ಆ.3 NEWS DESK : ಸೋಮವಾರಪೇಟೆ ತಾಲೂಕಿನ ಜಂಬೂರಿನಲ್ಲಿ ಇತ್ತೀಚೆಗೆ ಮರ ಬಿದ್ದು ಮೃತಪಟ್ಟ ಅಸ್ಸಾಂ ಮೂಲದ ಇಬ್ಬರು ಕಾರ್ಮಿಕರ ಪರಿಹಾರ ವಿಚಾರದಲ್ಲಿ ಕೆಲವು ರಾಜಕೀಯ ಪಕ್ಷಗಳು ಕ್ರೆಡಿಟ್ ತೆಗೊಳ್ಳಲು ಯತ್ನಿಸುತ್ತಿರುವುದನ್ನು ಯುನೈಟೆಡ್ ಪ್ಲಾಂಟೇಶನ್ ವರ್ಕರ್ಸ್ ಯೂನಿಯನ್ (ಎಐಟಿಯುಸಿ) ತೀವ್ರವಾಗಿ ಖಂಡಿಸಿದೆ. ಯುನೈಟೆಡ್ ಪ್ಲಾಂಟೇಶನ್ ವರ್ಕರ್ಸ್ ಯೂನಿಯನ್ ಕೊಡಗು ಶಾಖೆ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸಿ.ಧರ್ಮರಾಜ್ ಅವರು, ವಾಸ್ತವಾಂಶವನ್ನು ಮುಂದಿಟ್ಟು ಮಾತನಾಡಿ”ಕೊಡಗು ಜಿಲ್ಲೆಯಲ್ಲಿ 2004 ರಿಂದಲೂ ನಮ್ಮ ಪ್ಲಾಂಟೇಶನ್ ಸಂಘಟನೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ತೋಟಗಳಲ್ಲಿ ಅನಾಹುತ ಸಂಭವಿಸಿದಾಗ ಕಾರ್ಮಿಕ ಸಂಘಟನೆ ಮತ್ತು ಮಾಲೀಕರ ಸಂಘಟನೆಗಳು ಜಂಟಿಯಾಗಿ ಮಾತುಕತೆ ನಡೆಸಿ ಪರಿಹಾರ ಒದಗಿಸುತ್ತವೆ. ದುರಂತ ಸಂಭವಿಸಿದ ದಿನವೇ ನಾವು ಐಆರ್ ಅಧಿಕಾರಿಯೊಂದಿಗೆ ಸಂಧಾನ ನಡೆಸಿ, ಕಂಪನಿಯಿಂದ ಮೃತರ ಕುಟುಂಬಗಳಿಗೆ ತಲಾ ರೂ 5 ಲಕ್ಷದಂತೆ ಈಗಾಗಲೇ 10 ಲಕ್ಷ ಪರಿಹಾರ ವಿತರಿಸಲಾಗಿದೆ. ಮರಣ ಪ್ರಮಾಣಪತ್ರ ಬಂದ ನಂತರ ಪಿಎಫ್ ಒಳಗೊಂಡಂತೆ ಒಟ್ಟು ರೂ.30 ಲಕ್ಷದಷ್ಟು ಮೊತ್ತ ಎರಡೂ ಕುಟುಂಬಗಳಿಗೆ ಸಿಗಲಿದೆ. ಆದರೆ, ಈ ಹೋರಾಟವನ್ನು ತಾವೇ ಮಾಡಿದ್ದು ಎಂದು ಕೆಲವು ರಾಜಕೀಯ ಪಕ್ಷಗಳು ಹೇಳಿಕೊಳ್ಳುತ್ತಿರುವುದು ಹಾಸ್ಯಾಸ್ಪದ”ಎಂದರು. ಕಾಫಿ ಹಾಗೂ ಇತರೆ ತೋಟಗಳಲ್ಲಿ ಯುನೈಟೆಡ್ ಪ್ಲಾಂಟೇಶನ್ ವರ್ಕರ್ಸ್ ಯೂನಿಯನ್ ಸಂಘಟನೆ 2004 ರಿಂದ ಈ ತೋಟಗಳಲ್ಲಿ ಕಾರ್ಮಿಕರನ್ನು ಸಂಘಟಿಸಿ ಕಾರ್ಮಿಕರ ಪರ ಹಲವಾರು ಹೋರಾಟಗಳನ್ನು ನಡೆಸಿ ಕಾರ್ಮಿಕರಿಗೆ ನ್ಯಾಯ ಬದ್ಧವಾದ ಬೇಡಿಕೆಗಳನ್ನು, ಆಪತ್ಕಾಲದ ಪರಿಹಾರಗಳನ್ನು ಕೊಡಿಸುತ್ತಾ ಬಂದಿದೆ. ಕೊಡಗಿನಲ್ಲಿ ಕಾರ್ಮಿಕ ಸಂಘಟನೆಯಡಿ ಬೇರೆ ಬೇರೆ ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ. ಕೊಡಗು ಜಿಲ್ಲೆಯಲ್ಲಿ ಟಾಟಾ ಕಾಫಿಯಲ್ಲಿ ಶೆ.90 ರಷ್ಟು ಕಾರ್ಮಿಕರು ನಮ್ಮ ಸಂಘಟನೆ ಸದಸ್ಯರಾಗಿರುತ್ತಾರೆ. ಕಾರ್ಮಿಕರಿಗೆ ತೊಂದರೆಯಾದಾಗ ಕೂಡಲೇ ಸಮಸ್ಯೆ ಪರಿಹಾರಕ್ಕೆ ಕಾನೂನು ರೀತಿ ಸ್ಪಂದಿಸುತ್ತೇವೆ. ಜಿಲ್ಲೆಯಲ್ಲಿ ಹಲವಾರು ಕಾರ್ಮಿಕ ಸಮಸ್ಯೆಗಳು ಇದ್ದು ಅವುಗಳನ್ನು ಕಾನೂನು ರೀತಿ ಪರಿಹರಿಸಿಕೊಂಡು ಬರುತ್ತಿದ್ದೇವೆ. ಜಂಬೂರ್‍ನಲ್ಲಿ ಆಗಿರುವ ಘಟನೆ ಆಕಸ್ಮಿಕವಾಗಿರುತ್ತದೆ. ಮಾಡದ ಕೆಲಸವನ್ನು ಮಾಡಿದ್ದೇವೆ ಎಂದು ಹೇಳಿಕೊಳ್ಳುವುದು ಸರಿಯಲ್ಲ. ಒಂದು ರಾಜಕೀಯ ಪಕ್ಷದ ಅಧ್ಯಕ್ಷರು ಪರಿಹಾರ ನೀಡಿರುವುದಾಗಿ ಹೇಳಿರುವುದು ರಾಜಕೀಯ ಪ್ರೇರಿತ ಹಾಗೂ ವಾಸ್ತವಕ್ಕೆ ವಿರುದ್ಧ ಎಂದು ಯುನೈಟೆಡ್ ಪ್ಲಾಂಟೇಶನ್ ವರ್ಕರ್ಸ್ ಯೂನಿಯನ್ ಖಂಡಿಸುವುದಾಗಿ ಹೇಳಿದರು. ಗೋಷ್ಠಿಯಲ್ಲಿ ಎಐಟಿಯುಸಿ ಕಾರ್ಯದರ್ಶಿ ಜಿ.ರಮೇಶ್, ಕಾಫಿನಾಡು ಕಟ್ಟಡ ಕಾರ್ಮಿಕ ಸಂಘಟನೆಯ ಉಪಾಧ್ಯಕ್ಷ ಸೀತಾರಾಂ ಹಾಗೂ ಎಐಟಿಯುಸಿ ದಲಿತ ಸಂಘಟನೆಯ ರಾಜ್ಯ ಉಪಾಧ್ಯಕ್ಷ ರಮೇಶ್ ಮಾಯಮುಡಿ ಉಪಸ್ಥಿತರಿದ್ದರು.








