
ವಿರಾಜಪೇಟೆ ಆ.3 NEWS DESK : ಯುವಜನತೆ ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅಧಿಕ ಉತ್ಪಾದನೆ ಸಾಧಿಸುವ ಮೂಲಕ ಕೃಷಿ ಕ್ಷೇತ್ರದತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ರಾಮದಾಸ್ ಹೆಚ್.ವಿ. ಕರೆ ನೀಡಿದರು. ಪಾಲಿಬೆಟ್ಟ ಸರಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ಬಿ.ಡಿ. ಮುಕುಂದ ಅವರ ಅತ್ತೂರು ಗದ್ದೆ ಮನೆಯಲ್ಲಿ ಆಯೋಜಿಸಲಾಗಿದ್ದ ಭೂಮಾತೆಯ ಮಡಿಲಲ್ಲಿ ಗದ್ದೆಯಲ್ಲಿ ಗೆಲುವಿನ ಹೆಜ್ಜೆ ಗದ್ದೆ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ಜಾನಪದ ಹಾಗೂ ಗ್ರಾಮೀಣ ಕ್ರೀಡೆಗಳ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಈ ಕ್ರೀಡಾಕೂಟದಲ್ಲಿ ಕೆಸರಿನ ಕಿಡಿಗಳು, ಮಣ್ಣಿನ ಮಕ್ಕಳು, ಮಣ್ಣಿನ ಮೇಘಗಳು, ಗದ್ದೆಯ ಗೆಳೆಯರು, ಮಣ್ಣಿನ ರಾಣಿಯರು ಹಾಗೂ ಗ್ರಾಮೀಣ ಚಕ್ರವರ್ತಿಗಳು ಎಂಬ ವಿವಿಧ ತಂಡಗಳು ರಚನೆಗೊಂಡಿದ್ದವು. ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಹಗ್ಗ-ಜಗ್ಗಾಟ, ವಿಷದ ಚೆಂಡು ಹಾಗೂ ಕೆಸರುಗದ್ದೆ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಮ್ಮಿಲನಗೊಂಡರು. :: ಸಮಾಜ ಸೇವಕರಿಗೆ ಸನ್ಮಾನ: ಇದೇ ಸಂದರ್ಭದಲ್ಲಿ, ಗ್ರಾಮೀಣ ಭಾಗದಲ್ಲಿ ಶ್ರಮಿಸುತ್ತಿರುವ ಸಮಾಜ ಸೇವಕರಾದ ಬಿ.ಡಿ. ಮುಕುಂದ ಅವರಿಗೆ ಕಾಲೇಜಿನ ವತಿಯಿಂದ ಆತ್ಮೀಯವಾಗಿ ಸನ್ಮಾನ ಗೌರವ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಸಾಬು ಕಾಳಪ್ಪ, ಪ್ರಾಚಾರ್ಯರಾದ ಶೈನಾ ಕೆ.ಕೆ. ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಣ್ಣುವಂಡ ರತ್ನ ಸುಬ್ಬಯ್ಯ, ಉಪನ್ಯಾಸಕ ವೃಂದ ಹಾಗೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.









