ವಿರಾಜಪೇಟೆ, NEWS DESK ಆ.25: ಸಮೀಪದ ಮಗ್ಗುಲದ ಲಿಟಲ್ ಸ್ಕಾಲರ್ಸ್ ಅಕಾಡೆಮಿ ವಿದ್ಯಾ ಸಂಸ್ಥೆಯ ಎಲ್ ಎಸ್ ಎ ಕೇರ್ ವತಿಯಿಂದ ಈದ್ ಮಿಲಾದ್-ಉನ್-ನಬಿ ವಿಶೇಷ ಸೌಹಾರ್ದ ಕಾರ್ಯಕ್ರಮ ಜರುಗಿತು.
ಎಲ್ ಎಸ್ ಎ ಕೇರ್ ವತಿಯಿಂದ ವಿರಾಜಪೇಟೆಯ ಆರ್ಜಿ ಯಲ್ಲಿರುವ ಅನ್ವರುಲ್ ಹುದಾ ಪಬ್ಲಿಕ್ ಶಾಲೆಗೆ ಭೇಟಿ ನೀಡಲಾಯಿತು.
ಈದ್ ಮಿಲಾದ್-ಉನ್-ನಬಿ ಪ್ರಯುಕ್ತ ಆಯೋಜಿಸಲಾದ ಸೌಹಾರ್ದ ಕೂಟದಲ್ಲಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿ, ಅಲ್ಲಿನ ಮಕ್ಕಳೊಂದಿಗೆ ಮನೋರಂಜನಾ ಮತ್ತು ಸ್ನೇಹಭಾವದ ಕಾರ್ಯಕ್ರಮಗಳನ್ನು ನಡೆಸಿದರು.

ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಹಕಾರದೊಂದಿಗೆ ಸಂಗ್ರಹಿಸಲಾದ ಅಡಿಗೆ ಸಾಮಗ್ರಿಗಳು, ಕ್ರೀಡಾ ಸಾಮಗ್ರಿಗಳು ಹಾಗೂ ಇತರೆ ಅಗತ್ಯ ವಸ್ತುಗಳನ್ನು ಅಲ್ಲಿನ ವಿದ್ಯಾರ್ಥಿಗಳಿಗೆ ಪ್ರೀತಿಯಿಂದ ಹಸ್ತಾಂತರಿಸಲಾಯಿತು.
ಮಕ್ಕಳಲ್ಲಿ ವಿಶ್ವಾಸ, ಸ್ನೇಹ, ಸಹೋದರತ್ವ ಮತ್ತು ಸಮಾನತೆ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮಕ್ಕಳಲ್ಲಿರುವ ಜಾತಿ–ಧರ್ಮ ಭೇದಭಾವವನ್ನು ದೂರ ಮಾಡಿ ಮಾನವೀಯ ಮೌಲ್ಯಗಳನ್ನು ಬಲಪಡಿಸುವಲ್ಲಿ ಈ ಕಾರ್ಯಕ್ರಮದ ಉದ್ದೇಶ ಸಾಕಾರಗೊಂಡಿತು.
ಈ ಸಂದರ್ಭದಲ್ಲಿ ಅನ್ವರುಲ್ ಹುದಾ ಪಬ್ಲಿಕ್ ಶಾಲೆಯ ವ್ಯವಸ್ಥಾಪಕರು , ಆಡಳಿತ ಮಂಡಳಿಯವರು, ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥರಾದ ಪೂಜಾ ಸಜೇಶ್ ಅವರ ಸೇವಾ ಮನೋಭಾವವನ್ನು ಪ್ರಶಂಸಿಸಿ ಧನ್ಯವಾದಗಳನ್ನು ಅರ್ಪಿಸಿದರು.
ಈ ಕಾರ್ಯಕ್ರಮದಲ್ಲಿ ಅನ್ವರುಲ್ ಹುದಾ ಪಬ್ಲಿಕ್ ಶಾಲೆ ಮತ್ತು ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.







