
ಮಡಿಕೇರಿ NEWS DESK ಆ.26 : ದೈವಜ್ಞ ಬ್ರಾಹ್ಮಣ ಸಮಾಜ ಮಡಿಕೇರಿ ವತಿಯಿಂದ ನೂಲು ಹುಣ್ಣಿಮೆ (ಶ್ರಾವಣ ಹುಣ್ಣಿಮೆ), ಜನಿವಾರ ಹಬ್ಬ ಹಾಗೂ ಋಗ್ ಉಪಕರ್ಮವನ್ನು ಶ್ರದ್ಧಾಭಕ್ತಿಯಿಂದ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಆಚರಿಸಲಾಯಿತು. ಧಾರ್ಮಿಕ ಕಾರ್ಯಕ್ರಮವು ಸಮಾಜದ ಅಧ್ಯಕ್ಷ ಬಿ.ವಿ.ರೋಷನ್ ಹಾಗೂ ವೇದಮೂರ್ತಿ ಉಲ್ಲಾಸ್ ಭಟ್ ಅವರ ಸಮ್ಮುಖದಲ್ಲಿ ಶೇಖರ್ ಕಾಂಪ್ಲೆಕ್ಸ್ ನಲ್ಲಿ ನೆರವೇರಿತು. ಸಮಾಜದ ಹಲವಾರು ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಹಬ್ಬದ ಅಂಗವಾಗಿ ವೇದಮಂತ್ರಗಳ ಪಠಣದೊಂದಿಗೆ ಋಗ್ ಉಪಕರ್ಮ ಹಾಗೂ ನೂತನ ಜನಿವಾರ ಧಾರಣೆಯನ್ನು ಸಾಂಪ್ರದಾಯಿಕವಾಗಿ ನೆರವೇರಿಸಲಾಯಿತು. ಈ ಮೂಲಕ ಸಮಾಜದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಮುಂದುವರಿಸುವ ಜೊತೆಗೆ ಸಮಾಜ ಬಾಂಧವರಲ್ಲಿ ಒಗ್ಗಟ್ಟು ಮತ್ತು ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲಾಯಿತು. ಕಾರ್ಯಕ್ರಮದಲ್ಲಿ ಸಮಾಜದ ಪದಾಧಿಕಾರಿಗಳು ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.









