ಸಂಪಾಜೆ, NEWS DESK ಸೆ.11: ಮಗುವಿನ ಭವಿಷ್ಯಕ್ಕೆ ಭೂಮಿಕೆ ಸಿದ್ಧವಾಗುವುದು ಅಮ್ಮನ ಮಡಿಲಿನಲ್ಲಿಯೇ. ಮಕ್ಕಳಿಗೆ ತಾಯಿ ನೀಡುವ ಸಮಯ ಮತ್ತು ಪ್ರೀತಿಗೆ ಸಮಾನವಾದದ್ದು ಜಗತ್ತಿನಲ್ಲಿ ಬೇರಾವುದೂ ಇಲ್ಲ ಎಂದು ಸಾಹಿತಿ ಹಾಗೂ ಉಪನ್ಯಾಸಕಿ ಜಯಲಕ್ಷ್ಮಿ ಕೆ. ಅಭಿಪ್ರಾಯಪಟ್ಟರು.
ಸಂಪಾಜೆಯ ಕೀಲಾರು ಪ್ರತಿಷ್ಠಾನದ ವತಿಯಿಂದ ಸಂಪಾಜೆ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ತಾಯಂದಿರಿಗೆ ಜಾಗೃತಿ ಕಾರ್ಯಕ್ರಮ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ‘ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ತಾಯಂದಿರ ಪಾತ್ರ’ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.
ಪೋಷಕತ್ವ ಒಂದು ಅದ್ಭುತ ಕಲೆ. ಮಕ್ಕಳನ್ನು ಸಭ್ಯ, ಸುಶಿಕ್ಷಿತ ಹಾಗೂ ಸುಸಂಸ್ಕೃತ ಪ್ರಜೆಗಳನ್ನಾಗಿ ರೂಪಿಸುವಲ್ಲಿ ತಾಯಂದಿರ ಪಾತ್ರ ಮಹತ್ವದ್ದಾಗಿದೆ. ಮಕ್ಕಳ ಕನಸುಗಳು ನನಸಾಗಲು ಹಾಗೂ ಅವರ ಬದುಕು ಪರಿಪೂರ್ಣವಾಗಲು ಮಾತೆಯರ ಮಾರ್ಗದರ್ಶನ, ಪ್ರೋತ್ಸಾಹ ಮತ್ತು ತ್ಯಾಗ ಅತ್ಯಗತ್ಯ ಎಂದು ಜಯಲಕ್ಷ್ಮಿ ಹೇಳಿದರು.
ಸಂಪಾಜೆ ಎಜುಕೇಶನ್ ಸೊಸೈಟಿಯ ಸಂಚಾಲಕ ಎಂ. ಶಂಕರನಾರಾಯಣ ಭಟ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರ್ಥಪೂರ್ಣ ಸೇವೆ ಸಲ್ಲಿಸಿ ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ಕೆ.ಎಸ್. ಸೋಮಣ್ಣ ಹಾಗೂ ಶ್ರೀಮತಿ ಗಾಯತ್ರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಪಾಜೆ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷ ಯು.ಬಿ. ಚಕ್ರಪಾಣಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಕ್ಕಳ ಭವಿಷ್ಯಕ್ಕೆ ಶುಭ ಹಾರೈಸಿದರು. ಕೋಶಾಧಿಕಾರಿ ಬಿ.ಆರ್. ಪದ್ಮಯ್ಯ ಶಿಕ್ಷಕ ವೃತ್ತಿಯ ಪಾವಿತ್ರ್ಯತೆಯ ಕುರಿತು ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಲೋಕ್ಯಾ ನಾಯ್ಕ್ ಬಿ. ಸ್ವಾಗತಿಸಿದರು. ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎ. ಐತಪ್ಪ ಅಭಿನಂದನಾ ಮಾತುಗಳನ್ನಾಡಿದರು. ಶಿಕ್ಷಕ ಕುಮಾರ್ ಹೆಚ್.ಜಿ. ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕಿ ಶ್ರೀವಿದ್ಯಾ ನಿರೂಪಿಸಿದರು. ಸೃಷ್ಟಿ ವಂದಿಸಿದರು.







