ಮಡಿಕೇರಿ, NEWS DESK ಸೆ.20: ನಗರದ ರೋಟರಿ ವುಡ್ಸ್ ವತಿಯಿಂದ “ಪ್ರಕೃತಿಗೆ ಧಕ್ಕೆ ತರದಿರಿ” ಎಂಬ ಸಂದೇಶದೊಂದಿಗೆ ಬೈಕ್ ಜಾಥಾ ಆಯೋಜಿಸಲಾಗಿತ್ತು.
ಮಡಿಕೇರಿಯಿಂದ ಭಾಗಮಂಡಲ–ಕರಿಕೆ–ಪೆರಾಜೆ–ಸಂಪಾಜೆ ಮಾರ್ಗವಾಗಿ ಸುಮಾರು 150 ಕಿ.ಮೀ. ಸಾಗಿದ ರೋಟರಿ ವುಡ್ಸ್ ಬೈಕ್ ಸವಾರರು ಸಾರ್ವಜನಿಕರಲ್ಲಿ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಿದರು. “ರೋಟರಿ ಬೈಕ್ ರ್ಯಾಲಿ–ರೋಬಿ” ಹೆಸರಿನಲ್ಲಿ ನಡೆದ ಜಾಥಾದಲ್ಲಿ ವಿವಿಧ ಗ್ರಾಮಗಳಲ್ಲಿ ಪರಿಸರ ಮಾಲಿನ್ಯ ಮಾಡದಂತೆ ಸಾರ್ವಜನಿಕರಿಗೆ ಸಂದೇಶ ನೀಡಲಾಯಿತು.
ಮಡಿಕೇರಿಯಲ್ಲಿ ಬೈಕ್ ಜಾಥಾಕ್ಕೆ ರೋಟರಿ ಜಿಲ್ಲೆ 3181ರ ನಿರ್ದೇಶಕ ಅನಿಲ್ ಹೆಚ್.ಟಿ. ಚಾಲನೆ ನೀಡಿ ಮಾತನಾಡಿ, ರೋಟರಿ ವುಡ್ಸ್‌ನ ಉತ್ಸಾಹಿ ಬೈಕ್ ಸವಾರರು ಸತತ ಎರಡನೇ ವರ್ಷವೂ ಬೈಕ್ ಜಾಥಾ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಕಾರ್ಯ ಕೈಗೊಂಡಿರುವುದು ಶ್ಲಾಘನೀಯ ಎಂದರು. ಮುಂದಿನ ದಿನಗಳಲ್ಲೂ ಇನ್ನಷ್ಟು ಸಾಮಾಜಿಕ ಸಂದೇಶಗಳೊಂದಿಗೆ ಬೈಕ್ ರ್ಯಾಲಿ ಆಯೋಜಿಸುವಂತಾಗಲಿ ಎಂದು ಹಾರೈಸಿದರು.
ಬೈಕ್ ಜಾಥಾದಲ್ಲಿ ಹರೀಶ್ ಕಿಗ್ಗಾಲು, ರಂಜಿತ್ ಕಿಗ್ಗಾಲು, ಹಂಚೆಟ್ಟಿರ ಮನುಮುದ್ದಪ್ಪ, ಚೇಂದ್ರಿಮಾಡ ವಿನು ಈರಪ್ಪ, ಚಂದ್ರಶೇಖರ್, ಕಶ್ಯಪ್, ರಾಜೇಶ್ ಚೌಧರಿ, ಚೇತನ್ ಹಾಗೂ ರವಿಕುಮಾರ್ ಸೇರಿದಂತೆ 9 ಮಂದಿ ಪಾಲ್ಗೊಂಡಿದ್ದರು.








