ವಿರಾಜಪೇಟೆ, NEWS DESK ಸೆ.21: ಕೊಡಗು ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕಾಡಾನೆ ಹಾಗೂ ಹುಲಿ ದಾಳಿಗಳ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಕೊಡಗು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಅಮ್ಮಣಿಚಂಡ ರಂಜಿ ಪೂಣಚ್ಚ, ಜನರು ಹಾಗೂ ಸಾಕುಪ್ರಾಣಿಗಳ ಜೀವ ರಕ್ಷಣೆಗೆ ಸರ್ಕಾರ ಮತ್ತು ಅರಣ್ಯ ಇಲಾಖೆ ತಕ್ಷಣ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ರೈತರು, ಕಾರ್ಮಿಕರು ಹಾಗೂ ಸಾಕುಪ್ರಾಣಿಗಳ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ನಿರಂತರವಾಗಿ ವನ್ಯಜೀವಿ ದಾಳಿಗಳು ನಡೆಯುತ್ತಿದ್ದರೂ ಸರ್ಕಾರ ಮತ್ತು ಅರಣ್ಯ ಇಲಾಖೆ ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಜನರ ಜೀವ ಹೋದ ನಂತರ ಕೇವಲ ಪರಿಹಾರ ನೀಡುವುದಷ್ಟೇ ಸರ್ಕಾರದ ಜವಾಬ್ದಾರಿಯಲ್ಲ. ಜೀವಹಾನಿ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವುದು ಮೊದಲ ಆದ್ಯತೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದು ರಾಜಕೀಯ ಮಾಡುವ ಸಮಯವಲ್ಲ. ಜಿಲ್ಲೆಯ ಶಾಸಕರು ರಾಜಕೀಯವನ್ನು ಬದಿಗಿಟ್ಟು ಕೊಡಗಿನ ಜನರು ಹಾಗೂ ಸಾಕುಪ್ರಾಣಿಗಳ ಜೀವದ ಬಗ್ಗೆ ಗಂಭೀರವಾಗಿ ಚಿಂತಿಸಬೇಕು. ಜನರ ಜೀವ ಉಳಿಸಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ. ಇದು ಕೊಡಗಿನ ಜನರ ಬದುಕು ಮತ್ತು ಜೀವದ ಪ್ರಶ್ನೆಯಾಗಿದೆ ಎಂದು ರಂಜಿ ಪೂಣಚ್ಚ ಹೇಳಿದ್ದಾರೆ.
ಪ್ರಮುಖ ಬೇಡಿಕೆಗಳು
ಪರಿಹಾರ ಧನ ಹೆಚ್ಚಳ: ವನ್ಯಜೀವಿ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನೀಡುತ್ತಿರುವ ಪರಿಹಾರವನ್ನು ಗಣನೀಯವಾಗಿ ಹೆಚ್ಚಿಸಬೇಕು. ಗಾಯಾಳುಗಳಿಗೆ ಚಿಕಿತ್ಸಾ ವೆಚ್ಚ ಸೇರಿದಂತೆ ಸಮರ್ಪಕ ಪರಿಹಾರ ನೀಡಬೇಕು.
ತ್ವರಿತ ನಷ್ಟ ಪರಿಹಾರ: ಬೆಳೆ, ಜಾನುವಾರು ಹಾಗೂ ಇತರ ಆಸ್ತಿ ನಷ್ಟಕ್ಕೆ ವಾಸ್ತವಿಕ ಮೌಲ್ಯಕ್ಕೆ ಅನುಗುಣವಾಗಿ ಪರಿಹಾರವನ್ನು ತ್ವರಿತವಾಗಿ ವಿತರಿಸಬೇಕು.
ಅಧಿಕಾರಿಗಳ ಭೇಟಿ: ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಅಪಾಯದ ಪ್ರದೇಶಗಳಿಗೆ ನಿಯಮಿತವಾಗಿ ಭೇಟಿ ನೀಡಿ, ಸ್ಥಳೀಯರ ಸಮಸ್ಯೆಗಳನ್ನು ನೇರವಾಗಿ ಆಲಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು.
ತುರ್ತು ಕಾರ್ಯಾಚರಣೆ: ಅಪಾಯಕಾರಿ ಹುಲಿ ಮತ್ತು ಕಾಡಾನೆಗಳ ಚಲನವಲನವನ್ನು ಗುರುತಿಸಿ, ಜನವಸತಿ ಪ್ರದೇಶಗಳಿಗೆ ಪ್ರವೇಶಿಸುವುದನ್ನು ತಡೆಯಲು ತುರ್ತು ಕಾರ್ಯಾಚರಣೆ ಹಾಗೂ ನಿರಂತರ ನಿಗಾ ವ್ಯವಸ್ಥೆಯನ್ನು ಬಲಪಡಿಸಬೇಕು.
ಶಾಶ್ವತ ತಡೆ ಕ್ರಮಗಳು: ಆನೆ ಹಾವಳಿ ಹೆಚ್ಚಿರುವ ಪ್ರದೇಶಗಳಲ್ಲಿ ಸೋಲಾರ್ ಬೇಲಿ, ರೈಲು ಕಂಬಿ ಬೇಲಿ, ಕಂದಕ ಸೇರಿದಂತೆ ಶಾಶ್ವತ ತಡೆ ಕ್ರಮಗಳನ್ನು ಕೈಗೊಳ್ಳಬೇಕು.
ತುರ್ತು ಪ್ರತಿಕ್ರಿಯಾ ವ್ಯವಸ್ಥೆ: ವನ್ಯಜೀವಿ ದಾಳಿ ಸಂಭವಿಸಿದಾಗ ತಕ್ಷಣ ಸ್ಪಂದಿಸಲು ಅರಣ್ಯ ಇಲಾಖೆ, ಪೊಲೀಸ್ ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ಒಳಗೊಂಡ ತುರ್ತು ಪ್ರತಿಕ್ರಿಯಾ ವ್ಯವಸ್ಥೆ ರೂಪಿಸಬೇಕು.
ಶಾಸಕರ ಸಭೆಗೆ ಒತ್ತಾಯ: ಸಂಬಂಧಪಟ್ಟ ಶಾಸಕರು ತಕ್ಷಣ ಅರಣ್ಯ ಇಲಾಖೆ ಹಾಗೂ ಸರ್ಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕೊಡಗಿನ ಮಾನವ–ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇನ್ನೊಂದು ಜೀವ ಬಲಿಯಾಗುವ ಮುನ್ನ ಸರ್ಕಾರ, ಅರಣ್ಯ ಇಲಾಖೆ ಹಾಗೂ ಶಾಸಕರು ಎಚ್ಚೆತ್ತುಕೊಂಡು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ರಂಜಿ ಪೂಣಚ್ಚ ಅವರು ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.







