ಮಡಿಕೇರಿ, NEWS DESK ಅ.19: ತಲಕಾವೇರಿಯಲ್ಲಿ ಪವಿತ್ರ ಕಾವೇರಿ ತೀರ್ಥೋದ್ಭವದ ಬಳಿಕ ನಗರದ ಜಿ. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದ ಬಳಿಯ ಶ್ರೀ ಕಾವೇರಿ ಭಕ್ತ ಮಂಡಳಿಯ ವತಿಯಿಂದ 72ನೇ ವರ್ಷದ ‘ಕಾವೇರಿ ತೀರ್ಥ ವಿತರಣೆ’ ಕಾರ್ಯಕ್ರಮ ಭಾನುವಾರ ಶ್ರದ್ಧಾಭಕ್ತಿಯಿಂದ ನಡೆಯಿತು.
ವರ್ಷಂಪ್ರತಿಯಂತೆ ತಲಕಾವೇರಿಯಿಂದ ಕಾವೇರಿ ಪವಿತ್ರ ತೀರ್ಥವನ್ನು ತರಲಾದ ಬಳಿಕ ಶ್ರೀ ಕಾವೇರಿ ಭಕ್ತ ಮಂಡಳಿಯ ಪದಾಧಿಕಾರಿಗಳು ತೀರ್ಥ ಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ನಗರದ ನೂರಾರು ಭಕ್ತಾದಿಗಳು ಪಾಲ್ಗೊಂಡರು. ಇದೇ ಸಂದರ್ಭ ಭಕ್ತಾದಿಗಳಿಗೆ ಅನ್ನದಾನವೂ ಏರ್ಪಡಿಸಲಾಗಿತ್ತು.
ಬಳಿಕ ಅತ್ಯಾಕರ್ಷಕವಾಗಿ ಅಲಂಕರಿಸಲಾಗಿದ್ದ ಕಾವೇರಿ ರಥದ ಮೂಲಕ ಮಂಗಳವಾದ್ಯಗಳೊಂದಿಗೆ ನಗರದ ವಿವಿಧ ಬಡಾವಣೆಗಳಿಗೆ ಕಾವೇರಿ ತೀರ್ಥವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ವಿವಿಧ ಬಡಾವಣೆಗಳಲ್ಲಿ ಭಕ್ತಾದಿಗಳಿಗೆ ಪವಿತ್ರ ತೀರ್ಥವನ್ನು ವಿತರಿಸಲಾಯಿತು.
ಏಳು ದಶಕಗಳ ಪರಂಪರೆ
ಅಪರೂಪದ ಕಲಾವಿದರಾಗಿದ್ದ ದಿವಂಗತ ಅಣ್ಣು ಅವರು ಸುಮಾರು ಏಳು ದಶಕಗಳ ಹಿಂದೆ ಕಾವೇರಿ ಸಂಕ್ರಮಣದ ಬಳಿಕ ತಲಕಾವೇರಿ ಕ್ಷೇತ್ರಕ್ಕೆ ತೆರಳಲು ಸಾಧ್ಯವಾಗದ ಭಕ್ತಾದಿಗಳಿಗೆ ಪವಿತ್ರ ತೀರ್ಥವನ್ನು ವಿತರಿಸುವ ಸಂಕಲ್ಪದೊಂದಿಗೆ ಈ ಸೇವಾ ಕಾರ್ಯವನ್ನು ಆರಂಭಿಸಿದ್ದರು.
ಅಂದು ಕಾವೇರಿ ಮಂಟಪದ ಮೂಲಕ ಆರಂಭಗೊಂಡ ತೀರ್ಥ ವಿತರಣೆಯ ಪರಂಪರೆ ಇಂದಿಗೂ ಮುಂದುವರಿದಿದೆ. ಅಣ್ಣು ಅವರು ಇಂದು ಇಲ್ಲವಾದರೂ, ಅವರ ಮಕ್ಕಳಾದ ಕಲಾವಿದ ರವಿ ಮತ್ತು ಜಾಜಿ ಹಾಗೂ ಶ್ರೀ ಕಾವೇರಿ ಭಕ್ತ ಮಂಡಳಿಯ ಪದಾಧಿಕಾರಿಗಳು ಈ ಧಾರ್ಮಿಕ ಸೇವೆಯನ್ನು ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಮುಂದುವರಿಸಿಕೊಂಡು ಬರುತ್ತಿದ್ದಾರೆ.
ಕಾವೇರಿ ತೀರ್ಥ ವಿತರಣೆಯ ಮೂಲಕ ನಗರದ ವಿವಿಧ ಬಡಾವಣೆಗಳ ಭಕ್ತಾದಿಗಳಿಗೆ ತಲಕಾವೇರಿಯ ಪವಿತ್ರ ತೀರ್ಥವನ್ನು ತಲುಪಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು, ಈ ಪರಂಪರೆಗೆ ಭಕ್ತರಿಂದ ಮೆಚ್ಚುಗೆ ವ್ಯಕ್ತವಾಗಿದೆ.





































