ವಿರಾಜಪೇಟೆ, NEWS DESK ಅ.19: ಕೊಡಗು ಜಿಲ್ಲೆಯ ಮಾಜಿ ಅಂತರರಾಷ್ಟ್ರೀಯ ರಗ್ಬಿ ಆಟಗಾರ ತಿಮ್ಮಯ್ಯ ಮಾದಂಡ ಅವರು ರಗ್ಬಿ ಇಂಡಿಯಾದ SOM (Sportsperson of Outstanding Merit) ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಭಾರತೀಯ ರಗ್ಬಿ ಸಂಸ್ಥೆಯ ಮಂಡಳಿಗೆ ಆಯ್ಕೆಯಾಗಿದ್ದಾರೆ.
ತೀವ್ರ ಪೈಪೋಟಿಯಿಂದ ಕೂಡಿದ್ದ ಚುನಾವಣೆಯಲ್ಲಿ ಮಹಾರಾಷ್ಟ್ರದ ಚೈತನ್ಯ ಸಿಂಗ್ ಅವರನ್ನು ಸೋಲಿಸಿದ ತಿಮ್ಮಯ್ಯ ಮಾದಂಡ ಅವರು ಕ್ರೀಡಾ ಆಡಳಿತ ಕ್ಷೇತ್ರದಲ್ಲಿ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಈ ಸಾಧನೆಯು ಕೊಡಗು ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ಹೆಮ್ಮೆಯ ಸಂಗತಿಯಾಗಿದೆ.
ತಿಮ್ಮಯ್ಯ ಮಾದಂಡ ಅವರು 2010ರ ಕಾಮನ್ವೆಲ್ತ್ ಕ್ರೀಡಾಕೂಟ ಹಾಗೂ ಏಷ್ಯನ್ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 2006ರಿಂದ 2010ರವರೆಗೆ ಭಾರತೀಯ ತಂಡದ ಪರವಾಗಿ 42 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿರುವ ಅವರು, ತಮ್ಮ ಕ್ರೀಡಾ ಜೀವನದಲ್ಲಿ ಬೆಂಗಳೂರಿನ ರಗ್ಬಿ ತಂಡವನ್ನೂ ಪ್ರತಿನಿಧಿಸಿದ್ದಾರೆ.
ಕ್ರೀಡಾಪಟುವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಅನುಭವ ಪಡೆದಿರುವ ಅವರು, ಕ್ರೀಡಾ ಆಡಳಿತ ಕ್ಷೇತ್ರದಲ್ಲಿಯೂ ಗಮನಾರ್ಹ ಅನುಭವ ಹೊಂದಿದ್ದಾರೆ. 2011ರಿಂದ 2023ರವರೆಗೆ ಬಾಸ್ಕೆಟ್ಬಾಲ್, ಕ್ರಿಕೆಟ್, ವಾಲಿಬಾಲ್ ಹಾಗೂ ಬ್ಯಾಡ್ಮಿಂಟನ್ ಸೇರಿದಂತೆ ವಿವಿಧ ಕ್ರೀಡಾ ಲೀಗ್ಗಳ ಆಡಳಿತ ಮತ್ತು ನಿರ್ವಹಣೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ, ರಿಲಯನ್ಸ್ ಫೌಂಡೇಶನ್ ಹಾಗೂ ಎಚ್ಸಿಎಲ್ ಫೌಂಡೇಶನ್ಗಳ ಕ್ರೀಡಾ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.
ಪ್ರಸ್ತುತ ವಿವಿಧ ಕ್ರೀಡಾ ಲೀಗ್ಗಳೊಂದಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿರುವ ತಿಮ್ಮಯ್ಯ ಅವರು, ತಮ್ಮ ಕ್ರೀಡಾ ಅನುಭವ ಹಾಗೂ ಆಡಳಿತಾತ್ಮಕ ಜ್ಞಾನವನ್ನು ಭಾರತೀಯ ರಗ್ಬಿಯ ಬೆಳವಣಿಗೆಗೆ ಬಳಸಿಕೊಳ್ಳುವ ನಿರೀಕ್ಷೆಯಿದೆ.
ರಗ್ಬಿ ಇಂಡಿಯಾ ಮಂಡಳಿಯ ಸದಸ್ಯರಾಗಿ ದೇಶದಲ್ಲಿ ರಗ್ಬಿ ಕ್ರೀಡೆಯ ಆಡಳಿತ, ತಳಮಟ್ಟದ ಅಭಿವೃದ್ಧಿ, ಆಟಗಾರರಿಗೆ ಹೆಚ್ಚಿನ ಅವಕಾಶಗಳ ಸೃಷ್ಟಿ ಹಾಗೂ ಸ್ಪರ್ಧೆಗಳ ವಿಸ್ತರಣೆಗೆ ಸಂಬಂಧಿಸಿದ ನಿರ್ಧಾರಗಳಲ್ಲಿ ಅವರು ಭಾಗವಹಿಸಲಿದ್ದಾರೆ. ಭಾರತೀಯ ರಗ್ಬಿಯ ಭವಿಷ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಅವರ ಅನುಭವ ಸಹಕಾರಿಯಾಗಲಿದೆ ಎಂಬ ಆಶಯ ವ್ಯಕ್ತವಾಗಿದೆ.
ಚುನಾವಣೆಯಲ್ಲಿ ಗೆಲುವು ಸಾಧಿಸಿದ ತಿಮ್ಮಯ್ಯ ಮಾದಂಡ ಅವರಿಗೆ ರಗ್ಬಿ ಇಂಡಿಯಾದ ಅಧ್ಯಕ್ಷ ರಾಹುಲ್ ಬೋಸ್ ಅಭಿನಂದನೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಅವರೊಂದಿಗೆ ಕಾರ್ಯನಿರ್ವಹಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.
ತಮ್ಮ ಗೆಲುವಿನ ಕುರಿತು ಪ್ರತಿಕ್ರಿಯಿಸಿದ ತಿಮ್ಮಯ್ಯ ಮಾದಂಡ ಅವರು, ತಮ್ಮ ಮೇಲೆ ವಿಶ್ವಾಸವಿಟ್ಟು ಮತ ಚಲಾಯಿಸಿದ ಎಲ್ಲ SOM ಸದಸ್ಯರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಈ ಗೆಲುವನ್ನು ವೈಯಕ್ತಿಕ ಸಾಧನೆಯಾಗಿ ಮಾತ್ರವಲ್ಲದೆ, ಭಾರತೀಯ ರಗ್ಬಿ ಕ್ರೀಡೆಯ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುವ ಜವಾಬ್ದಾರಿಯಾಗಿ ಸ್ವೀಕರಿಸುವುದಾಗಿ ತಿಳಿಸಿದ್ದಾರೆ.
ಮಂಡಳಿಯ ಇತರ ಸದಸ್ಯರು ಹಾಗೂ ಕ್ರೀಡಾ ಸಮುದಾಯದೊಂದಿಗೆ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ, ಆಟಗಾರರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವುದರ ಜೊತೆಗೆ ಭಾರತೀಯ ರಗ್ಬಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಶ್ರಮಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಚುನಾವಣೆಯಲ್ಲಿ ಭಾಗವಹಿಸಿದ ಇತರ ಅಭ್ಯರ್ಥಿಗಳಿಗೂ ಅಭಿನಂದನೆ ಸಲ್ಲಿಸಿರುವ ಅವರು, ಕ್ರೀಡೆಯ ಸಮಗ್ರ ಬೆಳವಣಿಗೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಅಗತ್ಯವನ್ನು ಒತ್ತಿಹೇಳಿದ್ದಾರೆ.
ತಿಮ್ಮಯ್ಯ ಮಾದಂಡ ಅವರ ಈ ಆಯ್ಕೆಯು ಕೊಡಗಿನ ಕ್ರೀಡಾ ಪ್ರತಿಭೆಗೆ ಮತ್ತೊಂದು ಮನ್ನಣೆ ದೊರೆತಂತಾಗಿದ್ದು, ಭಾರತೀಯ ರಗ್ಬಿ ಕ್ರೀಡೆಯ ಅಭಿವೃದ್ಧಿಗೆ ಅವರ ಅನುಭವ ಹಾಗೂ ಕೊಡುಗೆ ಮಹತ್ವದ ಪಾತ್ರ ವಹಿಸಲಿದೆ ಎಂಬ ನಿರೀಕ್ಷೆ ಮೂಡಿಸಿದೆ.





































