ಮಡಿಕೇರಿ, NEWS DESK ಅ.19 : ಕೊಡಗು ಜಿಲ್ಲೆಯ ಮಡಿಕೇರಿ ನಗರ ಮತ್ತು ಗೋಣಿಕೊಪ್ಪ ಪಟ್ಟಣದಲ್ಲಿ ನಡೆಯಲಿರುವ ನಾಡಹಬ್ಬ ದಸರಾ ಉತ್ಸವದ ಹಿನ್ನೆಲೆಯಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಹಾಗೂ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಜಿಲ್ಲಾಡಳಿತ ತಾತ್ಕಾಲಿಕ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಿದೆ.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಸ್.ಜೆ. ಸೋಮಶೇಖರ್ ಅವರು ಈ ಕುರಿತು ಆದೇಶ ಹೊರಡಿಸಿದ್ದು, ಅಕ್ಟೋಬರ್ 21ರ ಸಂಜೆ 4 ಗಂಟೆಯಿಂದ ಅಕ್ಟೋಬರ್ 22ರ ಬೆಳಗ್ಗೆ 10 ಗಂಟೆಯವರೆಗೆ ಮಡಿಕೇರಿ ನಗರದೊಳಗೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಭಾರಿ ವಾಹನಗಳ ಸಂಚಾರಕ್ಕೂ ಪ್ರತ್ಯೇಕ ಮಾರ್ಗಗಳನ್ನು ನಿಗದಿಪಡಿಸಲಾಗಿದೆ.
ಭಾರಿ ವಾಹನಗಳಿಗೆ ಪರ್ಯಾಯ ಮಾರ್ಗ
- ಮಂಗಳೂರು ಕಡೆಯಿಂದ ಮೈಸೂರು ಕಡೆಗೆ: ಅಕ್ಟೋಬರ್ 21ರ ಮಧ್ಯಾಹ್ನ 1 ಗಂಟೆಯಿಂದ ಅಕ್ಟೋಬರ್ 22ರ ಬೆಳಗ್ಗೆ 10 ಗಂಟೆಯವರೆಗೆ ಭಾರಿ ವಾಹನಗಳು ಮಾಣಿ, ಸಕಲೇಶಪುರ ಮತ್ತು ಮೈಸೂರು ಮಾರ್ಗವಾಗಿ ಸಂಚರಿಸಬೇಕು.
- ಮೈಸೂರು ಕಡೆಯಿಂದ ಮಂಗಳೂರು ಕಡೆಗೆ: ಬಿಳಿಕೆರೆ, ಕೆ.ಆರ್. ನಗರ, ಹೊಳೆನರಸೀಪುರ, ಹಾಸನ ಮತ್ತು ಸಕಲೇಶಪುರ ಮಾರ್ಗವಾಗಿ ಸಂಚರಿಸಬೇಕು.
ಮಡಿಕೇರಿ ನಗರದಲ್ಲಿ ವಾಹನ ನಿಲುಗಡೆ ವ್ಯವಸ್ಥೆ
ದಸರಾ ವೀಕ್ಷಣೆಗೆ ವಿವಿಧ ಭಾಗಗಳಿಂದ ಆಗಮಿಸುವ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ಸ್ಥಳಗಳನ್ನು ನಿಗದಿಪಡಿಸಲಾಗಿದೆ.
- ಸೋಮವಾರಪೇಟೆ ಕಡೆಯಿಂದ ಬರುವ ವಾಹನಗಳು: ಸಂತ ಜೋಸೆಫ್ ಕಾನ್ವೆಂಟ್ ಮೈದಾನದಲ್ಲಿ ನಿಲುಗಡೆ ಮಾಡಬೇಕು. ಎಸ್.ಪಿ. ಕಚೇರಿ ಜಂಕ್ಷನ್ ಹಾಗೂ ಐಟಿಐ ಜಂಕ್ಷನ್ ಕಡೆಯಿಂದ ಬರುವ ವಾಹನಗಳಿಗೆ ಎಫ್ಎಂಸಿ ಕಾಲೇಜು ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
- ಮೈಸೂರು ಮತ್ತು ಸಿದ್ದಾಪುರ ಕಡೆಯಿಂದ ಬರುವ ವಾಹನಗಳು: ಚೈನ್ಗೇಟ್ ಮೂಲಕ ತೆರಳಿ ಮ್ಯಾನ್ಸ್ ಕಾಂಪೌಂಡ್ ಮೈದಾನದಲ್ಲಿ ನಿಲುಗಡೆ ಮಾಡಬೇಕು.
- ವಿರಾಜಪೇಟೆ ಮತ್ತು ಮೂರ್ನಾಡು ಕಡೆಯಿಂದ ಬರುವ ವಾಹನಗಳು: ಮೇಕೇರಿ ಶಾಲಾ ಮೈದಾನದಲ್ಲಿ ನಿಲುಗಡೆ ಮಾಡಬೇಕು.
- ಮಂಗಳೂರು ಕಡೆಯಿಂದ ಬರುವ ವಾಹನಗಳು: ತಾಳತ್ಮನೆ ನೇತಾಜಿ ಮೈದಾನ ಮತ್ತು ದುರ್ಗಾ ಭಗವತಿ ದೇವಸ್ಥಾನದ ಮೈದಾನದಲ್ಲಿ ನಿಲುಗಡೆ ಮಾಡಬೇಕು.
- ಗಾಳಿಬೀಡು, ಅಬ್ಬಿ ಫಾಲ್ಸ್ ಮತ್ತು ಕಾಲೂರು ಕಡೆಯಿಂದ ಬರುವ ವಾಹನಗಳು: ಎಫ್ಎಂಸಿ ಕಾಲೇಜು ಮೈದಾನದಲ್ಲಿ ನಿಲುಗಡೆ ಮಾಡಬೇಕು.
- ಭಾಗಮಂಡಲ ಕಡೆಯಿಂದ ಬರುವ ವಾಹನಗಳು: ತಾಳತ್ಮನೆಯ ಪಪ್ಪೀಸ್ ಗ್ಲಾಸ್ ಹೌಸ್ ಮೈದಾನದಲ್ಲಿ ನಿಲುಗಡೆ ಮಾಡಬೇಕು.
- ಮೈಸೂರು ಮತ್ತು ಸಿದ್ದಾಪುರ ಕಡೆಯಿಂದ ಬರುವ ದ್ವಿಚಕ್ರ ವಾಹನಗಳು: ಈಸ್ಟ್ ಎಂಡ್ ಹೋಟೆಲ್ ಮುಂಭಾಗದ ಶಾಂತಿ ಚರ್ಚ್ ಮೈದಾನದಲ್ಲಿ ನಿಲುಗಡೆ ಮಾಡಬೇಕು.
ನಗರದ ಗಣಪತಿ ಬೀದಿ, ಮಹದೇವಪೇಟೆ, ಕಾಲೇಜು ರಸ್ತೆ, ಕೊಹಿನೂರು ರಸ್ತೆ ಹಾಗೂ ನಗರದ ಮಧ್ಯಭಾಗದ ಸಾರ್ವಜನಿಕರು ತಮ್ಮ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸದೆ ಕ್ರೆಸೆಂಟ್ ಶಾಲಾ ಮೈದಾನ, ಹಿಂದೂಸ್ಥಾನ್ ಶಾಲಾ ಮೈದಾನ ಅಥವಾ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಿಲುಗಡೆ ಮಾಡಬೇಕು.
ಇದಲ್ಲದೆ, ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ, ಜೂನಿಯರ್ ಕಾಲೇಜು ಮೈದಾನ, ಎಪಿಎಂಸಿ ಮೈದಾನ, ಐಟಿಐ ಕಾಲೇಜು ಮೈದಾನ, ಹೊಸ ಖಾಸಗಿ ಬಸ್ ನಿಲ್ದಾಣ ಹಾಗೂ ಇತರ ನಿಗದಿತ ಸ್ಥಳಗಳಲ್ಲಿಯೂ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಮಡಿಕೇರಿಯಲ್ಲಿ ನಿಲುಗಡೆ ರಹಿತ ರಸ್ತೆಗಳು
ಅಕ್ಟೋಬರ್ 21ರ ಸಂಜೆ 4 ಗಂಟೆಯಿಂದ ಅಕ್ಟೋಬರ್ 22ರ ಬೆಳಗ್ಗೆ 10 ಗಂಟೆಯವರೆಗೆ ನಗರದೊಳಗಿನ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸುವುದರ ಜೊತೆಗೆ ನಿಲುಗಡೆ ನಿಷೇಧ ಜಾರಿಗೊಳಿಸಲಾಗುತ್ತದೆ.
ಸಂಪಿಗೆ ಕಟ್ಟೆಯಿಂದ ಉಕ್ಕುಡ, ಮಹದೇವಪೇಟೆ, ಎ.ವಿ. ಶಾಲಾ ಜಂಕ್ಷನ್ ಮತ್ತು ಕಾನ್ವೆಂಟ್ ಜಂಕ್ಷನ್ವರೆಗಿನ ರಸ್ತೆ ಹಾಗೂ ಹೊಸ ಖಾಸಗಿ ಬಸ್ ನಿಲ್ದಾಣದಿಂದ ರೇಸ್ ಕೋರ್ಸ್ ರಸ್ತೆ, ರಾಜಾಸೀಟ್ ರಸ್ತೆ ಮೂಲಕ ಮಂಗೇರಿರ ಮುತ್ತಣ್ಣ ರಸ್ತೆಯವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಗಣಪತಿ ಬೀದಿ, ಮಹದೇವಪೇಟೆ, ಕಾಲೇಜು ರಸ್ತೆ ಮತ್ತು ಕೊಹಿನೂರು ರಸ್ತೆಯಲ್ಲಿ ಅಕ್ಟೋಬರ್ 22ರ ಸಂಜೆ 4 ಗಂಟೆಯವರೆಗೆ ನಿಲುಗಡೆ ನಿಷೇಧ ಮುಂದುವರಿಯಲಿದೆ.
ಕೆಎಸ್ಆರ್ಟಿಸಿ ಬಸ್ಗಳು ತಾತ್ಕಾಲಿಕವಾಗಿ ಕೆಎಸ್ಆರ್ಟಿಸಿ ಡಿಪೋ ಮತ್ತು ಆರ್ಎಂಸಿ ಯಾರ್ಡ್ನಿಂದ ಕಾರ್ಯಾಚರಣೆ ನಡೆಸಲಿವೆ. ಖಾಸಗಿ ಬಸ್ಗಳು ನಗರದೊಳಗೆ ಪ್ರವೇಶಿಸದೆ ಜಿಟಿ ವೃತ್ತದಲ್ಲಿಯೇ ಪ್ರಯಾಣಿಕರನ್ನು ಹತ್ತಿಸಿ ಇಳಿಸಿ ತೆರಳಬೇಕು.
ಗೋಣಿಕೊಪ್ಪದಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ
ಗೋಣಿಕೊಪ್ಪ ದಸರಾ ಹಿನ್ನೆಲೆಯಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಉಮಾಮಹೇಶ್ವರಿ ದೇವಸ್ಥಾನದಿಂದ ಹರಿಶ್ಚಂದ್ರಪುರದವರೆಗೆ, ಪೊನ್ನಂಪೇಟೆ ರಸ್ತೆ ಜಂಕ್ಷನ್ನಿಂದ ಕೆಪಿಟಿಸಿಎಲ್ ಕಚೇರಿಯವರೆಗೆ, ಬೈಪಾಸ್ ರಸ್ತೆ ಜಂಕ್ಷನ್ನಿಂದ ಐಪಿ ಜಂಕ್ಷನ್ವರೆಗೆ ಹಾಗೂ ಪಾಲಿಬೆಟ್ಟ ರಸ್ತೆಯಲ್ಲಿ ಕೂರ್ಗ್ ಪಬ್ಲಿಕ್ ಸ್ಕೂಲ್ ರಸ್ತೆಯವರೆಗೆ ಮುಖ್ಯ ರಸ್ತೆಯ ಬದಿಯಲ್ಲಿ ವಾಹನ ನಿಲುಗಡೆಗೆ ಅವಕಾಶವಿರುವುದಿಲ್ಲ.
ವಿವಿಧ ಮಾರ್ಗಗಳಲ್ಲಿ ಸಂಚರಿಸುವ ವಾಹನಗಳಿಗೆ ಕೆಳಗಿನಂತೆ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ:
- ಮೈಸೂರು ಕಡೆಯಿಂದ ವಿರಾಜಪೇಟೆಗೆ ತೆರಳುವ ವಾಹನಗಳು: ತಿತಿಮತಿ, ಪಾಲಿಬೆಟ್ಟ ಮತ್ತು ಅಮ್ಮತ್ತಿ ಮಾರ್ಗವಾಗಿ ಸಂಚರಿಸಬೇಕು.
- ವಿರಾಜಪೇಟೆಯಿಂದ ಮೈಸೂರು ಕಡೆಗೆ ತೆರಳುವ ವಾಹನಗಳು: ಕೈಕೇರಿ ಗ್ರಾಮದ ಕಳತ್ಮಾಡ್, ಅತ್ತೂರು ಶಾಲಾ ಜಂಕ್ಷನ್, ಪಾಲಿಬೆಟ್ಟದ ಟಾಟಾ ಸ್ಟೋರ್ ಜಂಕ್ಷನ್ ಮತ್ತು ತಿತಿಮತಿ ಮಾರ್ಗವಾಗಿ ತೆರಳಬೇಕು.
- ಕೇರಳದಿಂದ ಮೈಸೂರು ಕಡೆಗೆ ತೆರಳುವ ವಾಹನಗಳು: ಪೆರುಂಬಾಡಿ, ವಿರಾಜಪೇಟೆ, ಅಮ್ಮತ್ತಿ, ಸಿದ್ದಾಪುರ ಮತ್ತು ಪಿರಿಯಾಪಟ್ಟಣ ಮಾರ್ಗವಾಗಿ ಸಂಚರಿಸಬೇಕು.
- ವಿರಾಜಪೇಟೆಯಿಂದ ಕಾನೂರು, ಶ್ರೀಮಂಗಲ ಮತ್ತು ಕುಟ್ಟ ಕಡೆಗೆ ತೆರಳುವ ವಾಹನಗಳು: ಹಾತೂರು, ಕುಂದಾ ಮತ್ತು ಪೊನ್ನಂಪೇಟೆ ಮಾರ್ಗ ಬಳಸಬೇಕು.
- ಬಾಳಲೆ ಕಡೆಯಿಂದ ವಿರಾಜಪೇಟೆಗೆ ತೆರಳುವ ವಾಹನಗಳು: ಪೊನ್ನಂಪೇಟೆ, ಕುಂದಾ ಮತ್ತು ಹಾತೂರು ಮಾರ್ಗವಾಗಿ ಸಂಚರಿಸಬೇಕು.
- ಮೈಸೂರು ಕಡೆಯಿಂದ ಶ್ರೀಮಂಗಲ ಮತ್ತು ಕುಟ್ಟ ಕಡೆಗೆ ತೆರಳುವ ವಾಹನಗಳು: ತಿತಿಮತಿ, ಕೋಣನಕಟ್ಟೆ, ಪೊನ್ನಪ್ಪಸಂತೆ, ನಲ್ಲೂರು ಮತ್ತು ಪೊನ್ನಂಪೇಟೆ ಮಾರ್ಗ ಬಳಸಬೇಕು.
- ಕುಟ್ಟ ಮತ್ತು ಶ್ರೀಮಂಗಲ ಕಡೆಯಿಂದ ಮೈಸೂರು ಕಡೆಗೆ ತೆರಳುವ ವಾಹನಗಳು: ಪೊನ್ನಂಪೇಟೆ, ನಲ್ಲೂರು, ಪೊನ್ನಪ್ಪಸಂತೆ, ಕೋಣನಕಟ್ಟೆ ಮತ್ತು ತಿತಿಮತಿ ಮಾರ್ಗವಾಗಿ ಸಂಚರಿಸಬೇಕು.
ಗೋಣಿಕೊಪ್ಪದಲ್ಲಿ ಪಾರ್ಕಿಂಗ್ ವ್ಯವಸ್ಥೆ
ದಸರಾ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರ ವಾಹನಗಳಿಗೆ ಸ್ಥಳಾವಾರು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
- ವಿರಾಜಪೇಟೆ ಕಡೆಯಿಂದ ಬರುವ ವಾಹನಗಳು: ಗೋಣಿಕೊಪ್ಪದ ಕಾವೇರಿ ಕಾಲೇಜು ಮೈದಾನದಲ್ಲಿ ನಿಲುಗಡೆ ಮಾಡಬೇಕು.
- ಪೊನ್ನಂಪೇಟೆ ಕಡೆಯಿಂದ ಬರುವ ವಾಹನಗಳು: ಗೋಣಿಕೊಪ್ಪ–ಪೊನ್ನಂಪೇಟೆ ರಸ್ತೆಯಲ್ಲಿರುವ ರುದ್ರಭೂಮಿಯ ಹಿಂಭಾಗದಲ್ಲಿ ನಿಲುಗಡೆ ಮಾಡಬೇಕು.
- ತಿತಿಮತಿ ಮತ್ತು ಬಾಳಲೆ ಕಡೆಯಿಂದ ಬರುವ ವಾಹನಗಳು: ಗೋಣಿಕೊಪ್ಪದ ಆರ್ಎಂಸಿ ಆವರಣದಲ್ಲಿ ನಿಲುಗಡೆ ಮಾಡಬೇಕು.
- ಪಾಲಿಬೆಟ್ಟ ಕಡೆಯಿಂದ ಬರುವ ವಾಹನಗಳು: ಶಾಸ್ತಾ ಇಂಡಸ್ಟ್ರೀಸ್ನಿಂದ ಅತ್ತೂರು ಕಡೆಗೆ ಹೋಗುವ ರಸ್ತೆಯ ಒಂದು ಬದಿಯಲ್ಲಿ ನಿಲುಗಡೆ ಮಾಡಬೇಕು.
ಸಂಚಾರ ನಿಯಂತ್ರಣಕ್ಕೆ ಅಗತ್ಯವಿರುವ ಸೂಚನಾ ಫಲಕಗಳನ್ನು ಅಳವಡಿಸಲು ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಅಧಿಕಾರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಸೂಚನೆ: ದಸರಾ ಉತ್ಸವದ ಸಂದರ್ಭದಲ್ಲಿ ಸಂಚಾರ ದಟ್ಟಣೆ ಉಂಟಾಗದಂತೆ ಸಾರ್ವಜನಿಕರು ನಿಗದಿಪಡಿಸಿದ ಪಾರ್ಕಿಂಗ್ ಸ್ಥಳಗಳನ್ನು ಬಳಸಬೇಕು. ಪೊಲೀಸ್ ಇಲಾಖೆ ಸೂಚಿಸುವ ಪರ್ಯಾಯ ಮಾರ್ಗಗಳನ್ನು ಅನುಸರಿಸಿ ಸಹಕರಿಸಬೇಕು.
















