ನಾಪೋಕ್ಲು, NEWS DESK ಅ.19: ನಾಪೋಕ್ಲು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾನುವಾರ ಸಂಜೆ ಗುಡುಗು ಸಹಿತ ಭಾರಿ ಮಳೆ ಸುರಿದಿದ್ದು, ಹಲವೆಡೆ ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು.
ನಾಪೋಕ್ಲು ಪಟ್ಟಣ ಸೇರಿದಂತೆ ಬೇತು, ನೆಲಜಿ, ಕಕ್ಕಬೆ, ಎಮ್ಮೆಮಾಡು, ಹೊದ್ದೂರು, ಕೊಟ್ಟಮುಡಿ, ಪಾಲೂರು ಹಾಗೂ ಬೆಟ್ಟಗೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಏಕಾಏಕಿ ಸುರಿದ ಧಾರಾಕಾರ ಮಳೆಯಿಂದ ಜನಜೀವನ ಕೊಂಚ ಅಸ್ತವ್ಯಸ್ತಗೊಂಡಿತು.
ನಾಪೋಕ್ಲು–ಹಳೆ ತಾಲೂಕು ಮುಖ್ಯ ರಸ್ತೆಯ ಕೆಪಿಎಸ್ ಶಾಲೆಯ ಸಮೀಪ ಭಾರಿ ಪ್ರಮಾಣದ ಮಳೆ ನೀರು ರಸ್ತೆಯ ಮೇಲೆ ಹರಿದು ಬಂದ ಪರಿಣಾಮ ರಸ್ತೆ ಕೆರೆಯಂತಾಗಿತ್ತು. ಇದರಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನ ಸವಾರರು ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸುವಂತಾಯಿತು.
ಇನ್ನೊಂದೆಡೆ, ಈ ಭಾಗದಲ್ಲಿ ಸುರಿದ ಮಳೆಯಿಂದ ಕೃಷಿಕರು ಹಾಗೂ ಕಾಫಿ ಮತ್ತು ಕಾಳುಮೆಣಸು ಬೆಳೆಗಾರರು ಸಂತಸ ವ್ಯಕ್ತಪಡಿಸಿದ್ದಾರೆ.
ವರದಿ: ದುಗ್ಗಳ ಸದಾನಂದ

















