ವಿರಾಜಪೇಟೆ, NEWS DESK ನ.5: ಕೊಡಗು ಜಿಲ್ಲೆಯಲ್ಲಿ ದಿನಕ್ಕೊಂದು ಕಡೆ ಹುಲಿ ದಾಳಿ ನಡೆಸಿ ಜಾನುವಾರುಗಳನ್ನು ಬಲಿ ಪಡೆಯುತ್ತಿರುವ ಘಟನೆಗಳು ರೈತರು ಹಾಗೂ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿವೆ. ಹುಲಿಗಳು ಸಹಜವಾಗಿ ದಾರಿ ತಪ್ಪಿ ಜನವಸತಿ ಪ್ರದೇಶಗಳಿಗೆ ಬರುತ್ತಿವೆಯೇ ಅಥವಾ ಬೇರೆಡೆಯಿಂದ ತಂದು ಬಿಡಲಾಗುತ್ತಿದೆಯೇ ಎಂಬ ಸಂಶಯಗಳಿಗೂ ವೈಜ್ಞಾನಿಕ ತನಿಖೆಯ ಮೂಲಕ ಉತ್ತರ ಕಂಡುಕೊಳ್ಳಬೇಕಿದೆ ಎಂದು ಕೊಡಗು ಜಿಲ್ಲಾ ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ಅಮ್ಮುಣಿಚಂಡ ರಂಜಿ ಪೂಣಚ್ಚ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಜಾನುವಾರುಗಳ ರಕ್ಷಣೆ ಹಾಗೂ ಹುಲಿಗಳ ಚಲನವಲನದ ನಿಖರ ಮಾಹಿತಿ ಸಂಗ್ರಹಿಸಲು ಸರ್ಕಾರ ಮತ್ತು ಕೊಡಗಿನ ಶಾಸಕರು ಕ್ರಮ ಕೈಗೊಳ್ಳಬೇಕು. ಅರಣ್ಯ ಇಲಾಖೆ ತಕ್ಷಣ ವೈಜ್ಞಾನಿಕ ಡ್ರೋನ್ ಸಮೀಕ್ಷೆ ಆರಂಭಿಸಬೇಕು. ಇದರೊಂದಿಗೆ ಕ್ಯಾಮೆರಾ ಟ್ರ್ಯಾಪ್ಗಳು ಸೇರಿದಂತೆ ಆಧುನಿಕ ವೈಜ್ಞಾನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಹುಲಿಗಳ ಚಲನವಲನವನ್ನು ಪತ್ತೆಹಚ್ಚಿ ಜನರಲ್ಲಿರುವ ಆತಂಕವನ್ನು ನಿವಾರಿಸಬೇಕು ಎಂದು ಆಗ್ರಹಿಸಿದರು.
ಪ್ರತಿ ಹುಲಿ ದಾಳಿ ನಡೆದ ಬಳಿಕ ಪರಿಹಾರ ಘೋಷಿಸುವುದಷ್ಟೇ ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ. ಇಂತಹ ದಾಳಿಗಳು ಮರುಕಳಿಸದಂತೆ ಪರಿಣಾಮಕಾರಿ ಮುನ್ನೆಚ್ಚರಿಕೆ ಹಾಗೂ ಶಾಶ್ವತ ತಡೆ ಕ್ರಮಗಳನ್ನು ಅರಣ್ಯ ಇಲಾಖೆ ಕೈಗೊಳ್ಳಬೇಕು. ವನ್ಯಜೀವಿಗಳ ಸಂರಕ್ಷಣೆ ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾಗಿ ರೈತರ ಬದುಕು ಮತ್ತು ಸಾರ್ವಜನಿಕರ ಸುರಕ್ಷತೆಯೂ ಇಲಾಖೆಯ ಆದ್ಯತೆಯಾಗಬೇಕು ಎಂದು ಹೇಳಿದರು.
ಕೊಡಗಿನ ರೈತರ ಹಿತದೃಷ್ಟಿಯಿಂದ ಸರ್ಕಾರ ಮತ್ತು ಅರಣ್ಯ ಇಲಾಖೆ ಯಾವುದೇ ವಿಳಂಬ ಮಾಡದೆ ತಕ್ಷಣ ಕಾರ್ಯಪ್ರವೃತ್ತರಾಗಬೇಕು ಎಂದು ರಂಜಿ ಪೂಣಚ್ಚ ಒತ್ತಾಯಿಸಿದರು.
















