ಮಡಿಕೇರಿ, NEWS DESK ನ.9: ಕೊಡಗು ಜಿಲ್ಲಾ ನಿವೃತ್ತ ಪೊಲೀಸ್ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆಯು ನವೆಂಬರ್ 17ರಂದು ನಗರದ ಪೊಲೀಸ್ ಮೈತ್ರಿ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಸಂಘದ ಮಾಜಿ ಅಧ್ಯಕ್ಷ ಎಂ.ಎ. ಅಪ್ಪಯ್ಯ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10.30ಕ್ಕೆ ನಡೆಯಲಿರುವ ಸಭೆಯಲ್ಲಿ ರಾಜ್ಯ ಹಾಗೂ ಜಿಲ್ಲಾ ಸಂಘದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ: ಮಹಾಸಭೆಯ ಸಂದರ್ಭದಲ್ಲಿ ಕೆಎಸ್ಆರ್ಪಿಯಲ್ಲಿ ಸೇವೆ ಸಲ್ಲಿಸಿದ ಪೊಲೀಸ್ ಸಿಬ್ಬಂದಿಗಳ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಪಿಯುಸಿಯ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಈ ಪುರಸ್ಕಾರಕ್ಕೆ ಅರ್ಹರಾಗಿರುತ್ತಾರೆ. ಇನ್ನೂ ಹೆಸರು ನೋಂದಾಯಿಸಿಕೊಳ್ಳದವರು ನವೆಂಬರ್ 12ರೊಳಗೆ ಹೆಸರು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರ ಸಹಕಾರದೊಂದಿಗೆ, ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಜಿಲ್ಲಾ ಪೊಲೀಸ್ ಇಲಾಖೆಯ ನಿವೃತ್ತ ಸಿಬ್ಬಂದಿಯ ಪ್ರತಿಭಾವಂತ ವಿದ್ಯಾರ್ಥಿಗೆ ಈ ವರ್ಷದಿಂದ ಪ್ರೋತ್ಸಾಹಧನ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ಚೊಕ್ಕಾಡಿ ಅಪ್ಪಯ್ಯ ಮಾತನಾಡಿ, ಸಂಘದ ಸದಸ್ಯತ್ವ ಹೊಂದಿರುವ 80 ವರ್ಷ ಮೇಲ್ಪಟ್ಟ ಹಿರಿಯ ಸದಸ್ಯರನ್ನು ಮಹಾಸಭೆಯಲ್ಲಿ ಸನ್ಮಾನಿಸಲಾಗುವುದು. ಅರ್ಹ ಹಿರಿಯರು ಸಂಘದ ಕಚೇರಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡು ಮಹಾಸಭೆಯಲ್ಲಿ ಪಾಲ್ಗೊಳ್ಳುವಂತೆ ಕೋರಿದರು.
ಸದಸ್ಯರಿಗೆ ಆರೋಗ್ಯ ಭಾಗ್ಯ ಸೌಲಭ್ಯ: ಸಂಘದಲ್ಲಿ ಸುಮಾರು 1,095 ಸದಸ್ಯರಿದ್ದು, ಸದಸ್ಯರಿಗೆ ಆರೋಗ್ಯ ಭಾಗ್ಯ ಸೌಲಭ್ಯ ಕಲ್ಪಿಸಲಾಗಿದೆ. ಈ ಸೌಲಭ್ಯ ಪಡೆಯಲು ಇಚ್ಛಿಸುವವರು ತಮ್ಮ ರ್ಯಾಂಕ್ಗೆ ಅನುಗುಣವಾಗಿ ಇಲಾಖೆಯು ನಿಗದಿಪಡಿಸಿರುವ ವಂತಿಗೆ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಈಗಾಗಲೇ 500ಕ್ಕೂ ಹೆಚ್ಚು ಸದಸ್ಯರು ಈ ಸೌಲಭ್ಯ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ಸಂಘದ ಸದಸ್ಯರು ನಿಧನರಾದ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಸಂಘದ ವತಿಯಿಂದ 5 ಸಾವಿರ ರೂ. ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಿಂದ 10 ಸಾವಿರ ರೂ. ನೆರವು ನೀಡಲಾಗುತ್ತಿದೆ ಎಂದರು.
ಪ್ರಸ್ತುತ ಆಡಳಿತ ಮಂಡಳಿಯು ನಿವೃತ್ತ ಸದಸ್ಯರಿಂದ ತಲಾ 2 ಸಾವಿರ ರೂ. ಪಡೆದು, ಅವರು ನಿಧನರಾದ ಸಂದರ್ಭದಲ್ಲಿ ಅವರ ಪತಿ ಅಥವಾ ಪತ್ನಿಗೆ 5 ಸಾವಿರ ರೂ. ನೆರವು ನೀಡುವ ನೂತನ ಯೋಜನೆಯನ್ನು ರೂಪಿಸಿದೆ. ಈಗಾಗಲೇ 435 ನಿವೃತ್ತ ಸದಸ್ಯರು ಈ ಯೋಜನೆಯ ಸದಸ್ಯತ್ವ ಪಡೆದಿದ್ದು, 2027ರ ಜನವರಿಯಿಂದ ಸೌಲಭ್ಯ ಜಾರಿಗೊಳಿಸಲು ನಿರ್ಧರಿಸಲಾಗಿದೆ.
ಈ ಯೋಜನೆಗೆ ನಿವೃತ್ತ ಡಿವೈಎಸ್ಪಿ ಹಾಗೂ ನಾಪೋಕ್ಲುವಿನ ಬಿ.ಇ. ಬೆಳ್ಳಪ್ಪ ಅವರು 50 ಸಾವಿರ ರೂ. ದೇಣಿಗೆ ನೀಡಿದ್ದಾರೆ. ಈ ಯೋಜನೆಯಡಿ ಇತರ ನೆರವುಗಳೂ ಸೇರಿ ನಿಧನರಾದ ಸದಸ್ಯರ ಕುಟುಂಬಕ್ಕೆ ಒಟ್ಟು 20 ಸಾವಿರ ರೂ. ನೆರವು ದೊರೆಯಲಿದೆ ಎಂದು ತಿಳಿಸಿದರು.
ಸಂಘದ ಕಾರ್ಯದರ್ಶಿ ಎಂ.ಕೆ. ಕಾವೇರಿಯಪ್ಪ ಮಾತನಾಡಿ, ಕಳೆದ ನವೆಂಬರ್ನಿಂದ ಇಲ್ಲಿಯವರೆಗೆ ಸಂಘದ 26 ಸದಸ್ಯರು ನಿಧನರಾಗಿದ್ದಾರೆ. ಈ ಸಂದರ್ಭದಲ್ಲಿ ಸಂಘದ ಪ್ರತಿನಿಧಿಗಳು ಮೃತ ಸದಸ್ಯರ ಮನೆಗಳಿಗೆ ತೆರಳಿ ಕುಟುಂಬದವರಿಗೆ ನೆರವಿನ ಮೊತ್ತವನ್ನು ಹಸ್ತಾಂತರಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಖಜಾಂಚಿ ಡಿ.ಟಿ. ಬಿದ್ದಪ್ಪ, ನಿರ್ದೇಶಕರಾದ ಕೆ.ವೈ. ಹಮೀದ್ ಹಾಗೂ ಕೆ.ಎಂ. ಸುಬ್ರಮಣಿ ಉಪಸ್ಥಿತರಿದ್ದರು.
























