ಕುಶಾಲನಗರ, NEWS DESK ನ.9: ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾಲೇಜಿನ ಇಕೋ ಕ್ಲಬ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಕುಶಾಲನಗರ ಸ್ಥಳೀಯ ಸಂಸ್ಥೆ, ರಾಜ್ಯ ವಿಜ್ಞಾನ ಪರಿಷತ್ ಘಟಕ ಹಾಗೂ ಜಿಲ್ಲಾ ಪರಿಸರ ಜಾಗೃತಿ ಸಮಿತಿಯ ವತಿಯಿಂದ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಣೆಯ ಕುರಿತು ಜನಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಹಸಿರು ದೀಪಾವಳಿ ಆಚರಣೆಯ ಮಹತ್ವದ ಕುರಿತು ಮಾಹಿತಿ ನೀಡಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಕೊಡಗು ಜಿಲ್ಲಾ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಪರಿಸರ ಕಾರ್ಯಕ್ರಮಗಳ ಸಂಘಟಕ ಟಿ.ಜಿ. ಪ್ರೇಮಕುಮಾರ್ ಅವರು ವಿದ್ಯಾರ್ಥಿಗಳಿಗೆ ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿದರು.
ಮಾಲಿನ್ಯಕಾರಿ ಪಟಾಕಿಗಳನ್ನು ಸಿಡಿಸುವುದರಿಂದ ವಾಯು ಮತ್ತು ಶಬ್ದ ಮಾಲಿನ್ಯ ಉಂಟಾಗುವುದಲ್ಲದೆ, ಪರಿಸರ ಹಾಗೂ ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತದೆ ಎಂದು ವಿವರಿಸಿದರು. ಪರಿಸರವನ್ನು ಮಾಲಿನ್ಯದಿಂದ ರಕ್ಷಿಸುವುದರೊಂದಿಗೆ ಜವಾಬ್ದಾರಿಯುತವಾಗಿ ಹಬ್ಬ ಆಚರಿಸುವುದು ಹಸಿರು ದೀಪಾವಳಿಯ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಪರಿಸರ ಕಾಳಜಿಯುಳ್ಳ ಜವಾಬ್ದಾರಿಯುತ ನಾಗರಿಕರಾಗಿ ಈ ದೀಪಾವಳಿ ಹಬ್ಬವನ್ನು ಪ್ರಕೃತಿಯೊಂದಿಗೆ ಪ್ರೀತಿಯಿಂದ ಆಚರಿಸುವುದಾಗಿ ಪ್ರತಿಜ್ಞೆ ಸ್ವೀಕರಿಸಿದರು. ಬಳಿಕ ಹಣತೆ ಬೆಳಗಿಸಿ, ‘ಹಸಿರು ದೀಪಾವಳಿ ಆಚರಿಸಿ’, ‘ಮಾಲಿನ್ಯ ಮುಕ್ತ ದೀಪಾವಳಿ’, ‘ಮಾಲಿನ್ಯಕಾರಿ ಪಟಾಕಿ ತ್ಯಜಿಸಿ ಪರಿಸರ ಸಂರಕ್ಷಿಸಿ’, ‘ಸುರಕ್ಷಿತ ಮತ್ತು ಹಸಿರು ದೀಪಾವಳಿ ಆಚರಿಸೋಣ ಬನ್ನಿ’ ಎಂಬ ಘೋಷಣೆಗಳ ಭಿತ್ತಿಫಲಕಗಳನ್ನು ಹಿಡಿದು ಜಾಗೃತಿ ಮೂಡಿಸಿದರು.
ಬೆಳಕಿನ ಹಬ್ಬ
ಕಾಲೇಜಿನ ಪ್ರಾಂಶುಪಾಲರಾದ ಬಿ.ಜಿ. ಶಾಂತಿ ಮಾತನಾಡಿ, ಮಾಲಿನ್ಯಕಾರಿ ಪಟಾಕಿಗಳಿಂದ ಉಂಟಾಗುವ ಅನಾಹುತಗಳ ಕುರಿತು ವಿದ್ಯಾರ್ಥಿಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಎಸ್.ಎನ್. ರಾಜೇಂದ್ರ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವಕಾಮತ್, ಕಸಾಪ ಪದಾಧಿಕಾರಿಗಳಾದ ಕೆ.ವಿ. ಉಮೇಶ್, ಎಂ.ಎನ್. ಮೂರ್ತಿ, ಉಪನ್ಯಾಸಕರಾದ ಟಿ.ಡಿ. ರಾಜ, ಎಚ್.ಎಂ. ಸೋನಿಯ, ಕೆ.ಎಲ್. ಅವಿನಾಶ್, ಪ್ರಮೋದ್, ಗ್ರಂಥಪಾಲಕ ಎಸ್. ನಂದೀಶ್, ಶಿಕ್ಷಕಿಯರಾದ ಬಿ.ಬಿ. ಹೇಮಲತಾ ಹಾಗೂ ಸ್ನೇಹ ಬಸಮ್ಮ ಉಪಸ್ಥಿತರಿದ್ದರು.
























