ಮಡಿಕೇರಿ, NEWS DESK ನ.11: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನೀಡಲಾಗುವ ಶ್ರೀ ಪೇರಿಯಂಡ ಪೆಮ್ಮಯ್ಯ ಮತ್ತು ಶ್ರೀಮತಿ ಜಿ.ಕೆ. ದೇವಕಿ ಪೆಮ್ಮಯ್ಯ ದತ್ತಿ ಪ್ರಶಸ್ತಿಯನ್ನು ‘ನುಡಿದೀಪ’ ಕೃತಿ ರಚನೆಗಾಗಿ ಡಾ. ಕೋರನ ಸರಸ್ವತಿ ಅವರಿಗೆ ಹಾಗೂ ಶ್ರೀಮತಿ ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿಯನ್ನು ‘ಸಿಪಾಯಿ ಮಾದಪ್ಪ’ ಕೃತಿ ರಚನೆಗಾಗಿ ಸಾಹಿತಿ ಉಳುವಂಗಡ ಕಾವೇರಿ ಉದಯ್ ಅವರಿಗೆ ಪ್ರದಾನ ಮಾಡಲಾಯಿತು.
ನಗರದ ಪತ್ರಿಕಾ ಭವನದ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಇಬ್ಬರು ಸಾಹಿತಿಗಳಿಗೆ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ‘ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡಗಿನ ಕೊಡುಗೆ’ ವಿಷಯದ ಕುರಿತು ಉಪನ್ಯಾಸ ನೀಡಿದ ಶಿಕ್ಷಕ ಊ.ರಾ. ನಾಗೇಶ್ ಮಾತನಾಡಿ, ಕಾವೇರಿ ನದಿ ಹರಿಯುವ ಪ್ರದೇಶಗಳಲ್ಲೆಲ್ಲ ಕನ್ನಡ ಭಾಷೆ ಸಮೃದ್ಧವಾಗಿ ಬೆಳೆದಿದೆ. ಈ ಹಿನ್ನೆಲೆಯಲ್ಲಿ ಕೊಡಗಿನ ಸಾಹಿತ್ಯ ರಚನೆಯಲ್ಲಿ ಕಾವೇರಿಯನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಕೊಡಗಿನಲ್ಲಿ ಹುಟ್ಟಿ ಸಾಹಿತ್ಯ ರಚಿಸಿದವರು ಹಾಗೂ ಜಿಲ್ಲೆಯಲ್ಲಿ ನೆಲೆಸಿದ ಹೊರಜಿಲ್ಲೆಯ ಸಾಹಿತಿಗಳು ಅತ್ಯುತ್ತಮ ಸಾಹಿತ್ಯ ಕೃತಿಗಳನ್ನು ನೀಡಿದ್ದಾರೆ. ಪಂಜೆ ಮಂಗೇಶರಾಯರು ಮತ್ತು ಭಾರತೀಸುತರಿಗೆ ಈ ಪುಣ್ಯಭೂಮಿ ಸಾಹಿತ್ಯ ಕೃಷಿಗೆ ಪ್ರೇರಣೆಯಾಗಿದೆ. ಪಂಜೆ ಮಂಗೇಶರಾಯರ ‘ಎಲ್ಲಿ ಭೂ ರಮೆ ದೇವ ಸನ್ನಿಧಿ’ ಹಾಡು ಜನಜನಿತವಾಗಿದೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಕೊಡಗಿನ ಅರಸನ ಕುರಿತು ರಚಿಸಿದ ‘ಚಿಕ್ಕವೀರರಾಜೇಂದ್ರ’ ಕೃತಿ ಜ್ಞಾನಪೀಠ ಪ್ರಶಸ್ತಿಗೆ ಪಾತ್ರವಾಗಿದೆ ಎಂದು ತಿಳಿಸಿದರು.
ಆಶಯ ನುಡಿಗಳನ್ನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಯುವ ಸಾಹಿತಿಗಳನ್ನು ಒಗ್ಗೂಡಿಸಿ ಅವರ ಸಾಹಿತ್ಯ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಸಾಹಿತ್ಯ ಕಾರ್ಯಾಗಾರಗಳನ್ನು ಆಯೋಜಿಸಬೇಕು ಎಂದು ಸಲಹೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪ್ರಸ್ತುತ 45 ದತ್ತಿ ಪ್ರಶಸ್ತಿಗಳಿದ್ದು, ಇವುಗಳ ಸಂಖ್ಯೆ 100ಕ್ಕೂ ಅಧಿಕವಾದರೆ ವರ್ಷದ 365 ದಿನಗಳೂ ಸಾಹಿತ್ಯ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗುತ್ತದೆ. ವಿಶೇಷವಾಗಿ ಶಾಲಾ-ಕಾಲೇಜುಗಳಲ್ಲಿ ಹೆಚ್ಚಿನ ಸಾಹಿತ್ಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿ ಬೆಳೆಸಬೇಕು. ಇದುವರೆಗೆ 24 ಮಹಿಳಾ ಸಾಹಿತಿಗಳು ಗೌರಮ್ಮ ದತ್ತಿ ಪ್ರಶಸ್ತಿಗೆ ಭಾಜನರಾಗಿರುವುದು ಹೆಮ್ಮೆಯ ಸಂಗತಿ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿ, ದತ್ತಿ ನಿಧಿಗಳ ನೆರವಿನಿಂದ ಯುವ ಸಮೂಹದಲ್ಲಿ ಸಾಹಿತ್ಯದ ಒಲವು ಮೂಡಿಸುವ ಉದ್ದೇಶದಿಂದ ಶಾಲೆಗಳಲ್ಲಿ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ದತ್ತಿ ನಿಧಿ ನೀಡಿರುವ ದಾನಿಗಳ ಆಶಯದಂತೆ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಪ್ರಶಸ್ತಿ ಪುರಸ್ಕೃತರಾದ ಡಾ. ಕೋರನ ಸರಸ್ವತಿ ಮಾತನಾಡಿ, ಬದಲಾದ ಸಾಮಾಜಿಕ ಪರಿಸ್ಥಿತಿ ಹಾಗೂ ಆಧುನಿಕತೆಯ ಭರಾಟೆಯಲ್ಲಿ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗಿದೆ ಎಂಬ ಮಾತಿದೆ. ಆದರೂ ನಿಜವಾದ ಸತ್ವ ಹೊಂದಿರುವ ಉತ್ತಮ ಪುಸ್ತಕಗಳು ಎಂದಿಗೂ ಓದುಗರಿಂದ ದೂರವಾಗುವುದಿಲ್ಲ. ಪುಸ್ತಕ ಓದುವ ಹವ್ಯಾಸವನ್ನು ಬದುಕಿನ ಭಾಗವಾಗಿಸಿಕೊಂಡವರು ಎಂದಿಗೂ ಏಕಾಂಗಿಗಳಾಗಿರುವುದಿಲ್ಲ ಎಂದು ಹೇಳಿದರು.
ಉಳುವಂಗಡ ಕಾವೇರಿ ಉದಯ್ ಮಾತನಾಡಿ, ಸಮಾಜಕ್ಕೆ ಸ್ಪಂದಿಸಿ ಅಂತರಂಗದ ಭಾವನೆಗಳಿಗೆ ಅಕ್ಷರ ರೂಪ ನೀಡುವ ಮೂಲಕ ಮೂಡಿಬರುವ ಸಾಹಿತ್ಯಕ್ಕೆ ಸಾಮಾಜಿಕ ಪರಿವರ್ತನೆ ತರುವ ಅಗಾಧ ಶಕ್ತಿಯಿದೆ. ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅವಕಾಶಗಳನ್ನು ಕಲ್ಪಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು.
ಸಮಾರಂಭವನ್ನು ಉದ್ಘಾಟಿಸಿದ ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ. ಸುಭಾಷ್ ನಾಣಯ್ಯ ಮಾತನಾಡಿ, ಸಮಾಜದ ಎಲ್ಲ ವರ್ಗಗಳನ್ನು ಒಗ್ಗೂಡಿಸಿ ಮುಖ್ಯವಾಹಿನಿಯತ್ತ ಕೊಂಡೊಯ್ಯುವ ಶಕ್ತಿ ಸಾಹಿತ್ಯಕ್ಕಿದೆ. ನಾಗರಿಕ ಸಮಾಜವನ್ನು ಪ್ರಬುದ್ಧವಾಗಿ ರೂಪಿಸುವ ಪ್ರಮುಖ ಮಾಧ್ಯಮವೂ ಸಾಹಿತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಹಿರಿಯ ರಂಗಕರ್ಮಿ ನೆರವಂಡ ಉಮೇಶ್ ಮಾತನಾಡಿ, ಸಾಹಿತಿಗಳಿಗೆ ಚಪ್ಪಾಳೆಗಿಂತ ಮಿಗಿಲಾದ ಪ್ರೋತ್ಸಾಹ ದೊರೆಯುವುದು ವಿರಳ. ಆದ್ದರಿಂದ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಸಾಹಿತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಸಾಹಿತ್ಯ ಮತ್ತು ಸಂಸ್ಕೃತಿಗೆ ಜಾತಿ-ಮತಗಳ ಭೇದಗಳನ್ನು ಮೀರಿ ಮಾನವೀಯ ನೆಲೆಯಲ್ಲಿ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿಯಿದೆ ಎಂದು ಹೇಳಿದರು.
ಸಮಾರಂಭದಲ್ಲಿ ದತ್ತಿ ದಾನಿಗಳಾದ ಕೊರವಂಡ ರೇವತಿ ಮತ್ತು ಕೊರವಂಡ ತಿಮ್ಮಯ್ಯ, ಡಾ. ಸುಭಾಷ್ ನಾಣಯ್ಯ, ಊ.ರಾ. ನಾಗೇಶ್ ಹಾಗೂ ಪ್ರತಿಮಾ ರೈ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಸಾಪ ಸಂಘಟನಾ ಕಾರ್ಯದರ್ಶಿ ಬಿ.ಎಂ. ವಾಸು ರೈ ಉಪಸ್ಥಿತರಿದ್ದರು. ಕಸಾಪ ತಂಡದ ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಜಿಲ್ಲಾ ಕೋಶಾಧಿಕಾರಿ ಎಸ್.ಎಸ್. ಸಂಪತ್ ಕುಮಾರ್ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಪುದಿಯನೆರವನ ರೇವತಿ ರಮೇಶ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಸಮಿತಿ ಸದಸ್ಯರಾದ ಎಂ. ಶ್ರೀಧರ ಹೂವಲ್ಲಿ ಮತ್ತು ರೇಣುಕಾ ಅವರು ಸನ್ಮಾನಿತರನ್ನು ಸಭೆಗೆ ಪರಿಚಯಿಸಿದರು. ನೆರವಂಡ ಉಮೇಶ್ ವಂದಿಸಿದರು.























