ಮಡಿಕೇರಿ, NEWS DESK ನ.11: ರಾಜಾಸೀಟು ರಸ್ತೆಯ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಕಾಮಗಾರಿಯ ಹಿನ್ನೆಲೆಯಲ್ಲಿ ರಸ್ತೆಯ ಬದಿಯಲ್ಲಿ ದಶಕಗಳಿಂದ ಬೆಳೆದು ನಿಂತಿರುವ 12 ಅತ್ತಿ ಮರಗಳನ್ನು ಕಡಿದು ಹರಾಜು ನಡೆಸಲು ನಗರಸಭೆ ವತಿಯಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಇದಕ್ಕೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದ್ದು, ಮರಗಳ ಕಡಿತಕ್ಕೆ ಅನುಮತಿ ನೀಡದಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಮರಗಳ ಕಡಿತಕ್ಕೆ ಸಾರ್ವಜನಿಕರ ವಿರೋಧ
ರಾಜಾಸೀಟು ಪರಿಸರ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದು, ರಸ್ತೆಯ ಬದಿಯಲ್ಲಿರುವ ಅತ್ತಿ ಮರಗಳು ನೂತನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಯಾವುದೇ ರೀತಿಯ ಅಡಚಣೆ ಉಂಟುಮಾಡುವುದಿಲ್ಲ. ಆದರೂ, ಮರಗಳಿರುವ ಸ್ಥಳದಲ್ಲಿ ಇಂಟರ್ಲಾಕ್ ಅಳವಡಿಸಿ ಸೌಂದರ್ಯೀಕರಣದ ನೆಪದಲ್ಲಿ ಮರಗಳನ್ನು ಕಡಿದು ಸೌದೆ ಹರಾಜು ಮಾಡಲು ಉದ್ದೇಶಿಸಲಾಗಿದೆ ಎಂದು ಸಾರ್ವಜನಿಕರು ಆಕ್ಷೇಪಿಸಿದ್ದಾರೆ.
ರಸ್ತೆ ಅಭಿವೃದ್ಧಿ ಕಾಮಗಾರಿಗೆ ತಮ್ಮ ವಿರೋಧವಿಲ್ಲ. ಆದರೆ, ವೈಜ್ಞಾನಿಕವಾಗಿ ಕಾಮಗಾರಿ ನಡೆಸಿದಲ್ಲಿ ಮರಗಳನ್ನು ಕಡಿಯುವ ಅಗತ್ಯವಿರುವುದಿಲ್ಲ. ಈ ಅತ್ತಿ ಮರಗಳು ಸ್ಥಳೀಯ ಪಕ್ಷಿ ಪ್ರಭೇದಗಳಿಗೆ ಆಶ್ರಯ ನೀಡುವುದರ ಜೊತೆಗೆ ಸಾರ್ವಜನಿಕರಿಗೆ ನೆರಳು ಒದಗಿಸುತ್ತಿವೆ. ವಾಯುವಿಹಾರಕ್ಕೂ ಅನುಕೂಲವಾಗಿವೆ. ಆದ್ದರಿಂದ ಅನಗತ್ಯ ಮರಗಳ ಹನನವನ್ನು ತಡೆಯಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಗರಸಭೆಯೊಂದಿಗೆ ಚರ್ಚಿಸಿ ನಿರ್ಧಾರ: ಡಿ.ಸಿ.ಎಫ್
ಮನವಿ ಸ್ವೀಕರಿಸಿ ಮಾತನಾಡಿದ ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಅವರು, ಮರಗಳನ್ನು ಕಡಿಯದೆಯೇ ಕಾಮಗಾರಿ ನಡೆಸುವಂತೆ ಅರಣ್ಯ ಇಲಾಖೆಯಿಂದ ನಗರಸಭೆಗೆ ಮನವಿ ಮಾಡಲಾಗಿತ್ತು. ಆದರೆ, ಅದು ಸಾಧ್ಯವಿಲ್ಲ ಎಂದು ನಗರಸಭೆಯ ಅಭಿಯಂತರರು ತಿಳಿಸಿದ್ದು, ಮರಗಳನ್ನು ಕಡಿದು ಸೌದೆ ಹರಾಜು ನಡೆಸಲು ಇಲಾಖೆಗೆ ಮನವಿ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಮರಗಳ ಕಡಿತದ ವಿರುದ್ಧ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಮರಗಳನ್ನು ಕಡಿದು ಸೌದೆ ಹರಾಜು ಮಾಡಲು ಅನುಮತಿ ನೀಡುವುದಿಲ್ಲ. ನಗರಸಭೆಯ ಅಧಿಕಾರಿಗಳೊಂದಿಗೆ ಮತ್ತೊಮ್ಮೆ ಚರ್ಚಿಸಿ ಮರಗಳಿಗೆ ಹಾನಿಯಾಗದಂತೆ ಕಾಮಗಾರಿ ನಡೆಸುವಂತೆ ಒತ್ತಾಯಿಸಲಾಗುವುದು ಎಂದು ಭರವಸೆ ನೀಡಿದರು.
ಇದೇ ಸಂದರ್ಭ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಅವರು, ಅಗತ್ಯವಿದ್ದಲ್ಲಿ ಮಾತ್ರ ಮರಗಳನ್ನು ಕಡಿಯುವಂತೆ ಸಂಬಂಧಪಟ್ಟವರಿಗೆ ಸೂಚಿಸುವುದಾಗಿ ತಿಳಿಸಿದರು.
ಈ ಸಂದರ್ಭ ಆಕ್ಷೇಪಣೆ ಸಲ್ಲಿಸಿದ ಪ್ರಜ್ಜಾ ಜಿ.ಆರ್., ಪ್ರಜ್ವಲ್ ಜಿ.ಆರ್., ಶರತ್ ಸರಳಾಯ, ಅನಿಲ್ ಬೆಟ್ಟದಳ್ಳಿ, ಡಾ. ಅನುಶ ಎಸ್., ವಕೀಲರಾದ ರಾಷ್ಟ್ರಿತ್ ಚಂಗಪ್ಪ, ಪ್ರಯಾಗ್ ಗೌಡ, ಪ್ರಸನ್ನ ಕೆ.ಟಿ., ಸಂಜಯ್ ಶೆಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.























