ಸುಂಟಿಕೊಪ್ಪ, NEWS DESK ನ.17: ಕೊಡಗು ಜಿಲ್ಲೆಯ ವ್ಯಾಪ್ತಿ ಚಿಕ್ಕದಾಗಿದ್ದರೂ ಅರೆಭಾಷೆ ಗೌಡರ ಸಂಘಟನೆಯ ಅವಶ್ಯಕತೆ ಬಹಳಷ್ಟಿದೆ ಎಂದು ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕರದ್ಲಾಜೆ ಆನಂದ ಅಭಿಪ್ರಾಯಪಟ್ಟರು.
ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಂಜನಾಥಯ್ಯ ಸಭಾಂಗಣದಲ್ಲಿ ನಡೆದ ಗೌಡ ಸಂಘ ಸುಂಟಿಕೊಪ್ಪದ 11ನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಭಾಗಮಂಡಲದಿಂದ ಕುಶಾಲನಗರದವರೆಗೆ ಹಾಗೂ ವಿರಾಜಪೇಟೆಯಿಂದ ಕರಿಕೆಯವರೆಗೆ ಗೌಡ ಸಂಘಗಳು ಸದೃಢವಾಗಿ ಮತ್ತು ಸುಸಜ್ಜಿತವಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ ಜಿಲ್ಲೆಯಲ್ಲಿ ನಡೆಯುವ ಗೌಡ ಸಂಘಗಳ ಕಾರ್ಯಕ್ರಮಗಳು ಹಾಗೂ ಮೆರವಣಿಗೆಗಳಲ್ಲಿ ಕೇವಲ ಸಂಘದ ನಿರ್ದೇಶಕರು ಮಾತ್ರ ಭಾಗವಹಿಸುತ್ತಿರುವುದು ವಿಷಾದನೀಯ. ಸಂಘದ ಪ್ರತಿಯೊಬ್ಬ ಸದಸ್ಯರಿಗೂ ಜವಾಬ್ದಾರಿಯಿದ್ದು, ಎಲ್ಲರೂ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಸಮಾಜದ ಕಾರ್ಯಕ್ರಮಗಳನ್ನು ಬಾಡಿಗೆ ಕಟ್ಟಡಗಳಲ್ಲಿ ನಡೆಸುವುದರಿಂದ ಹಲವು ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ ಆದಷ್ಟು ಬೇಗ ಸ್ವಂತ ಕಟ್ಟಡ ನಿರ್ಮಿಸಿಕೊಂಡು ಕಾರ್ಯಕ್ರಮಗಳನ್ನು ನಡೆಸುವಂತಾಗಬೇಕು ಎಂದು ಸಲಹೆ ನೀಡಿದರು.
ಸುಂಟಿಕೊಪ್ಪ ಗೌಡ ಸಂಘವು ಸ್ವಂತ ಜಾಗ ಖರೀದಿಸಿರುವುದನ್ನು ಶ್ಲಾಘಿಸಿದ ಅವರು, ಇಲ್ಲಿ ಪರಿಸರ ಸ್ನೇಹಿ ಮಾದರಿಯಲ್ಲಿ ಗೌಡ ಸಮಾಜದ ಕಟ್ಟಡ ನಿರ್ಮಿಸಬೇಕು ಎಂದು ತಿಳಿಸಿದರು. ತಲಕಾವೇರಿಯಲ್ಲಿ ನಡೆಯುವ ತೀರ್ಥೋದ್ಭವ ಕಾರ್ಯಕ್ರಮ ನಮ್ಮದೇ ಆಗಿದ್ದು, ಅಲ್ಲಿ ಗೌಡ ಜನಾಂಗದವರೇ ತಕ್ಕ ಮುಖ್ಯಸ್ಥರಾಗಿದ್ದಾರೆ. ಕೊಡಗಿನಲ್ಲಿ ಗೌಡ ಜನಾಂಗದವರು ಶೇ.14ರಷ್ಟಿದ್ದು, ನಮ್ಮದೇ ಆದ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿಕೊಳ್ಳುವ ಬದಲು ಬೇರೆ ಜನಾಂಗವನ್ನು ಅನುಕರಿಸುವುದು ವಿಷಾದನೀಯ ಎಂದರು.
ಸಮಾರಂಭದ ಆರಂಭದಲ್ಲಿ ಗೌರವಾಧ್ಯಕ್ಷ ಯಂಕನ ಉಲ್ಲಾಸ್, ಹಿರಿಯರಾದ ಕೋರನ ವಿಶ್ವನಾಥ್ ಮತ್ತು ಪಡನೂರನ ಬೋಪಯ್ಯ ಅವರ ಉಪಸ್ಥಿತಿಯಲ್ಲಿ ಕುದೇವರ ವೆಂಕಟರಮಣ ಹಾಗೂ ಗಣಪತಿಗೆ ದೀಪ ಬೆಳಗಿ ಪೂಜೆ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಕೊಡಗು ಮಹಿಳಾ ಒಕ್ಕೂಟದ ಅಧ್ಯಕ್ಷೆ ಮೂಟೆಮನೆ ಪುಷ್ಪಾವತಿ ಅವರ ಸಮಕ್ಷಮದಲ್ಲಿ ಸುಂಟಿಕೊಪ್ಪ ಗೌಡ ಸಂಘದ ಮಹಿಳಾ ಒಕ್ಕೂಟವನ್ನು ಸ್ಥಾಪಿಸಲಾಯಿತು. ಮಹಿಳಾ ಒಕ್ಕೂಟದ ಅಧ್ಯಕ್ಷೆಯಾಗಿ ಪಟ್ಟೆಮನೆ ಗಿರೀಜ ಉದಯಕುಮಾರ್, ಕಾರ್ಯದರ್ಶಿಯಾಗಿ ಕೆದಕಲ್ ಪೊನ್ನಮ್ಮ ಹಾಗೂ ನಿರ್ದೇಶಕರಾಗಿ ಕಡ್ಯದ ರತಿ ಅರುಣ್, ಓಡಯಪ್ಪನ ವಿಮಲಾವತಿ ಮತ್ತು ಗುಡ್ಡೆಮನೆ ಜ್ಯೋತಿ ಹರೀಶ್ ಆಯ್ಕೆಯಾದರು.
ಗೌಡ ಯುವ ಒಕ್ಕೂಟವನ್ನೂ ರಚಿಸಲಾಗಿದ್ದು, ಅಧ್ಯಕ್ಷರಾಗಿ ಹೊನ್ನಪಾಡಿ ಸುರೇಶ್ ಕುಶಾಲಪ್ಪ ಅವರನ್ನು ಆಯ್ಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಸಮಾಜದ ಮಕ್ಕಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಗೌಡ ಸಂಘದ ಅಧ್ಯಕ್ಷ ಕುಂಜಿಲನ ಎಸ್. ಮಂಜುನಾಥ್ ವಹಿಸಿದ್ದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಬಿಳಿಯಾರ ಜವಹಾರ್, ಕಾರ್ಯದರ್ಶಿ ಯಂಕನ ಕೌಶಿಕ್, ಖಜಾಂಚಿ ಕಡ್ಯದ ಅರುಣ್ ಸೇರಿದಂತೆ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.
















