ಸುಂಟಿಕೊಪ್ಪ, ನ.17, NEWS DESK: ವಿದ್ಯೆ, ಜ್ಞಾನ ನೀಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅವಕಾಶ ಕಲ್ಪಿಸಿದ ಶಾಲೆಗೆ ಹಳೆಯ ವಿದ್ಯಾರ್ಥಿಗಳು ತಮ್ಮಿಂದಾದ ಅಳಿಲು ಸೇವೆ ಸಲ್ಲಿಸುವ ಕುರಿತು ಚಿಂತಿಸಬೇಕು. ಸ್ನೇಹ ಸಮ್ಮಿಲನವು ಎಲ್ಲರೂ ಒಂದೆಡೆ ಸೇರಿ ಸಂಭ್ರಮಿಸುವ ಹಾಗೂ ಗುರುಗಳನ್ನು ಸನ್ಮಾನಿಸುವ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಬಾರದು ಎಂದು ನಿವೃತ್ತ ಮುಖ್ಯೋಪಾಧ್ಯಾಯ ಕೆ.ಎಸ್. ಸಿದ್ದಲಿಂಗಸ್ವಾಮಿ (ಸುರೇಶ್ ಮಾಸ್ಟರ್) ಕರೆ ನೀಡಿದರು.
ಕೊಡಗರಹಳ್ಳಿಯ ಸುಂಟಿಕೊಪ್ಪ ನಾಡ ಪ್ರೌಢಶಾಲೆಯಲ್ಲಿ 1990ನೇ ಸಾಲಿನ 10ನೇ ತರಗತಿಯ ಹಳೆಯ ವಿದ್ಯಾರ್ಥಿಗಳ ಬಳಗದ ವತಿಯಿಂದ ಆಯೋಜಿಸಿದ್ದ ‘ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ’ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು.
ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಸಿದ್ದಲಿಂಗಸ್ವಾಮಿ, “ನಾನು ಅಧ್ಯಾಪಕನಾಗುತ್ತೇನೆ ಎಂದು ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ. ತಂದೆ-ತಾಯಿಯ ಬದುಕಿನ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಉದ್ಯೋಗ ಅರಸಿ ಕುಶಾಲನಗರದ ಸೇತುವೆ ದಾಟಿ ಮೊದಲ ಬಾರಿಗೆ ಕೊಡಗಿಗೆ ಕಾಲಿಟ್ಟೆ. ಈ ಶಾಲೆಗೆ ಸೇರಿದ ಬಳಿಕ ಅಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸುವ ಸೌಭಾಗ್ಯ ನನ್ನದಾಯಿತು. ಅಂದು ನಾವು ಕಲಿಸಿದ ವಿದ್ಯಾರ್ಥಿಗಳು ಇಂದು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆ, ದುಡಿಮೆ ಹಾಗೂ ಸೇವೆಯ ಮೂಲಕ ಉತ್ತಮ ಹೆಸರು ಗಳಿಸಿರುವುದನ್ನು ಕಂಡಾಗ ಸಾರ್ಥಕ ಭಾವನೆ ಮೂಡುತ್ತದೆ,” ಎಂದು ತಿಳಿಸಿದರು.
ಶಾಲಾ ಕೊಠಡಿಗೆ ನೆಲಹಾಸು ಕಾಮಗಾರಿ ಘೋಷಣೆ
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 1990ರ ಸಾಲಿನ 10ನೇ ತರಗತಿಯ ಹಳೆಯ ವಿದ್ಯಾರ್ಥಿಗಳ ಬಳಗವು ತಾವು ಕಲಿತ ಶಾಲೆಯ ಅಭಿವೃದ್ಧಿಗೆ ಕೈಜೋಡಿಸುವ ಉದ್ದೇಶದಿಂದ ಶಾಲೆಯ ಒಂದು ಕೊಠಡಿಯ ನೆಲಹಾಸು ಕಾಮಗಾರಿಯನ್ನು ಸಂಪೂರ್ಣವಾಗಿ ಪೂರೈಸಿಕೊಡುವುದಾಗಿ ಇದೇ ಸಂದರ್ಭದಲ್ಲಿ ಘೋಷಿಸಿತು.
ಕಾರ್ಯಕ್ರಮದಲ್ಲಿ ತಮಗೆ ವಿದ್ಯೆ ಕಲಿಸಿ ಮಾರ್ಗದರ್ಶನ ನೀಡಿದ ನಿವೃತ್ತ ಮುಖ್ಯೋಪಾಧ್ಯಾಯ ಕೆ.ಎಸ್. ಸಿದ್ದಲಿಂಗಸ್ವಾಮಿ ಹಾಗೂ ಶಿಕ್ಷಕಿಯರಾದ ಸಾವಿತ್ರಿ, ದೇವಮ್ಮಾಜಿ ಮತ್ತು ಲಲಿತಾ ಅವರನ್ನು ಹಳೆಯ ವಿದ್ಯಾರ್ಥಿಗಳು ಸನ್ಮಾನಿಸಿ ಗುರುವಂದನೆ ಸಲ್ಲಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕಿಯರಾದ ಸಾವಿತ್ರಿ, ದೇವಮ್ಮಾಜಿ ಹಾಗೂ ಲಲಿತಾ ಅವರು, ದಶಕಗಳ ಬಳಿಕ ಹಳೆಯ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಲ್ಲಿ ಕಂಡು ಸಂತಸ ವ್ಯಕ್ತಪಡಿಸಿದರು. ಅಲ್ಲದೆ, ವಿದ್ಯಾರ್ಥಿಗಳ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ 1990ರ ಸಾಲಿನ ಹಳೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಾಲಾ ದಿನಗಳ ಸವಿ ನೆನಪುಗಳನ್ನು ಹಂಚಿಕೊಂಡರು.
















