ಮಡಿಕೇರಿ, NEWS DESK ನ.17: ಬುಡಕಟ್ಟು ಸಮುದಾಯದ ಕಲ್ಯಾಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಾ, ಮಹಿಳೆಯರ ಏಳಿಗೆಗೆ ಮಾರ್ಗದರ್ಶನ ನೀಡುತ್ತಾ, ದುರ್ಬಲ ವರ್ಗದ ಜನರಿಗೆ ನೆರವಿನ ಹಸ್ತ ಚಾಚುವ ಮೂಲಕ ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡಿರುವ ದಕ್ಷಿಣ ಕೊಡಗಿನ ಅತ್ತೂರು ಗ್ರಾಮದ ಡಾ. ಅಪ್ಪನೆರವಂಡ ಶಾಂತಿ ಅಚ್ಚಪ್ಪ ಅವರ ಜೀವನಗಾಥೆ ಇದೀಗ ಪುಸ್ತಕ ರೂಪ ಪಡೆದುಕೊಂಡಿದೆ.
ಸಾಹಿತಿ ಟಿ.ಆರ್. ಪ್ರಶಾಂತ್ ಅವರು ರಚಿಸಿರುವ ‘ಶಾಂತ ಸಾಗರ’ ಕೃತಿಯ ಮುಖಪುಟವನ್ನು ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಅನಾವರಣಗೊಳಿಸಲಾಯಿತು. ಸಾಮಾಜಿಕ ಹೋರಾಟಗಾರ ಹಾಗೂ ನಿವೃತ್ತ ಕರ್ನಲ್ ಸಿ.ಪಿ. ಮುತ್ತಣ್ಣ ಅವರು ಪುಸ್ತಕದ ಮುಖಪುಟವನ್ನು ಅನಾವರಣಗೊಳಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಬದುಕಿನ ಹಲವು ಸವಾಲುಗಳನ್ನು ದಿಟ್ಟವಾಗಿ ಎದುರಿಸಿರುವ ಶಾಂತಿ ಅಚ್ಚಪ್ಪ ಅವರು ಮಹಿಳಾ ಸಮುದಾಯದ ಏಳಿಗೆಗೆ ನಿರಂತರವಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ಜೀವನದ ಸಂಕಷ್ಟಗಳ ನಡುವೆಯೂ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಉದಾತ್ತ ಚಿಂತನೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಬುಡಕಟ್ಟು ಸಮುದಾಯದ ಕಲ್ಯಾಣಕ್ಕಾಗಿ ಶ್ರಮಿಸಿರುವ ಅವರು, ಕೆಲಕಾಲ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ನ.22ರಂದು ದುಬೈನಲ್ಲಿ ಪುಸ್ತಕ ಬಿಡುಗಡೆ
ಲೇಖಕ ಟಿ.ಆರ್. ಪ್ರಶಾಂತ್ ಅವರು ಶಾಂತಿ ಅಚ್ಚಪ್ಪ ಅವರ ಜೀವನಗಾಥೆಯನ್ನು ‘ಶಾಂತ ಸಾಗರ’ ಶೀರ್ಷಿಕೆಯಡಿ ಪುಸ್ತಕ ರೂಪದಲ್ಲಿ ದಾಖಲಿಸಿದ್ದಾರೆ. ನವೆಂಬರ್ 22ರಂದು ದುಬೈನಲ್ಲಿ ಕನ್ನಡಿಗರು ಆಯೋಜಿಸಿರುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಈ ಕೃತಿಯನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಲಾಯಿತು.
ಸಾಹಿತಿ ಟಿ.ಆರ್. ಪ್ರಶಾಂತ್ ಮಾತನಾಡಿ, ‘ಶಾಂತ ಸಾಗರ’ ಕೃತಿಯನ್ನು ಕನ್ನಡ, ಇಂಗ್ಲಿಷ್ ಮತ್ತು ಕೊಡವ ಭಾಷೆಗಳಲ್ಲಿ ಹೊರತರಲಾಗುತ್ತಿದೆ. ಕನ್ನಡ ಕೃತಿಯನ್ನು ಇಂಗ್ಲಿಷ್ಗೆ ತಾವೇ ಅನುವಾದಿಸಿದ್ದು, ಕೊಡವ ಭಾಷೆಗೆ ಕಿಶನ್ ಉತ್ತಪ್ಪ ಅವರು ಅನುವಾದ ಮಾಡಿದ್ದಾರೆ. ಇಂಗ್ಲಿಷ್ ಮತ್ತು ಕೊಡವ ಭಾಷೆಯ ಕೃತಿಗಳನ್ನು ಸ್ಥಳೀಯವಾಗಿ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದರು.
ಅತ್ತೂರು ಗ್ರಾಮದಲ್ಲಿ ನ್ಯಾಷನಲ್ ಅಕಾಡೆಮಿ ಶಾಲೆಯನ್ನು ಸ್ಥಾಪಿಸುವ ಮೂಲಕ ಆ ಭಾಗದ ಮಕ್ಕಳ ಶಿಕ್ಷಣಕ್ಕೂ ಶಾಂತಿ ಅಚ್ಚಪ್ಪ ಅವರು ವಿಶೇಷ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬೊಟ್ಟೋಳಂಡ ನೈಲಾ ಗಣೇಶ್ ಅವರು, ಅಪ್ಪನೆರವಂಡ ಶಾಂತಿ ಅಚ್ಚಪ್ಪ ಅವರು ಸಮಾಜದ ದುರ್ಬಲ ವರ್ಗದ ಜನರಿಗೆ ನಿರಂತರವಾಗಿ ನೆರವು ನೀಡುತ್ತಾ, ಸಮಾಜಸೇವೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
















