ಕುಶಾಲನಗರ, NEWS DESK ನ.18: ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಕುಂಠಿತವಾಗುತ್ತಿರುವುದು ಕರ್ನಾಟಕ ಮತ್ತು ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅಖಿಲ ಭಾರತ ಸನ್ಯಾಸಿಗಳ ಸಂಘದ ಅಧ್ಯಕ್ಷರಾದ ಶ್ರೀ ರಾಮನಂದ ಕುಮಾರ ಗುರುಪರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಕಾವೇರಿ ನದಿ ಸ್ವಚ್ಛತಾ ಆಂದೋಲನ ಹಾಗೂ ಅಖಿಲ ಭಾರತ ಸನ್ಯಾಸಿಗಳ ಸಂಘದ ಆಶ್ರಯದಲ್ಲಿ ಸ್ವಚ್ಛ ಕಾವೇರಿಗಾಗಿ ಹಮ್ಮಿಕೊಂಡಿದ್ದ 16ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆಯ ಸಮಾರೋಪ ಸಮಾರಂಭವು ಕಾವೇರಿ ಮತ್ತು ಬಂಗಾಳಕೊಲ್ಲಿ ಸಮುದ್ರ ಸಂಗಮ ಸ್ಥಳವಾದ ತಮಿಳುನಾಡಿನ ಪೂಂಪುಹಾರ್‌ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ಮತ್ತು ತಮಿಳುನಾಡು ಭಾಗಗಳಲ್ಲಿ ಪ್ರಕೃತಿಯ ಅಸಮತೋಲನದ ಪರಿಣಾಮಗಳು ಗೋಚರಿಸುತ್ತಿದ್ದು, ಕೃಷಿ ಸೇರಿದಂತೆ ವಿವಿಧ ಮಾನವ ಚಟುವಟಿಕೆಗಳು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ನದಿ, ಪ್ರಕೃತಿ ಮತ್ತು ಪರಿಸರವನ್ನು ಪ್ರತಿಯೊಬ್ಬರೂ ಆರಾಧಿಸಿ ಸಂರಕ್ಷಿಸಬೇಕು. ಕಾವೇರಿಯ ಆರಾಧನೆ ಹಾಗೂ ಸಂರಕ್ಷಣೆಯ ಮೂಲಕ ಹಲವು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಖಿಲ ಭಾರತೀಯ ಸನ್ಯಾಸಿಗಳ ಸಂಘದ ಪ್ರಮುಖರಾದ ಶ್ರೀ ವೇದಾನಂದ ಸ್ವಾಮೀಜಿ ಮಾತನಾಡಿ, ನದಿ ತೀರಗಳು ಸಂಸ್ಕೃತಿಗಳ ಉಗಮ ಸ್ಥಾನಗಳಾಗಿವೆ. ನಮ್ಮ ದೇಶದಲ್ಲಿ ನದಿಗಳಿಗೆ ತಾಯಿಯ ಸ್ಥಾನ ನೀಡಿ ಪೂಜಿಸಲಾಗುತ್ತದೆ. ದಕ್ಷಿಣ ಭಾರತದ ಜೀವನಾಡಿಯಾಗಿರುವ ಕಾವೇರಿ ಸಪ್ತ ನದಿಗಳಲ್ಲಿ ಒಂದಾಗಿದೆ. ಆದರೆ, ಇಂದು ನದಿ ತನ್ನ ಒಡಲಿನಲ್ಲಿ ಅಪಾರ ಪ್ರಮಾಣದ ಮಾಲಿನ್ಯವನ್ನು ಹೊತ್ತು ಹರಿಯುತ್ತಿರುವುದು ವಿಷಾದನೀಯ ಸಂಗತಿ ಎಂದರು.
ಜನರಲ್ಲಿ ನದಿ ಸಂರಕ್ಷಣೆಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಕೊಡಗು ಜಿಲ್ಲೆಯ ತಲಕಾವೇರಿಯಿಂದ ತಮಿಳುನಾಡಿನ ಕಾವೇರಿಪಟ್ಟಣಂವರೆಗೆ ವಿವಿಧ ರಾಜ್ಯಗಳ ಸಾಧು-ಸಂತರು, ಸ್ವಾಮೀಜಿಗಳು ಹಾಗೂ ಕಾರ್ಯಕರ್ತರು ಪ್ರತಿವರ್ಷ ಒಂದು ತಿಂಗಳ ಕಾಲ ಸ್ವಚ್ಛ ಕಾವೇರಿ ಜಾಗೃತಿ ರಥಯಾತ್ರೆ ನಡೆಸುತ್ತಿದ್ದಾರೆ. ಸ್ವಚ್ಛ ಕಾವೇರಿಯ ಸಂಕಲ್ಪದೊಂದಿಗೆ ಈ ಅಭಿಯಾನ ನಿರಂತರವಾಗಿ ಮುಂದುವರಿಯುತ್ತಿದೆ ಎಂದು ತಿಳಿಸಿದರು.
ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ಮಾತನಾಡಿ, ಕಳೆದ 16 ವರ್ಷಗಳಿಂದ ತಲಕಾವೇರಿಯಿಂದ ತಮಿಳುನಾಡಿನ ಪೂಂಪುಹಾರ್‌ವರೆಗೆ ಜಾಗೃತಿ ರಥಯಾತ್ರೆ ಹಮ್ಮಿಕೊಳ್ಳುವ ಮೂಲಕ ನದಿಯ ಮಹತ್ವ ಹಾಗೂ ಸಂರಕ್ಷಣೆಯ ಕುರಿತು ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಈ ಬಾರಿ ತಲಕಾವೇರಿಯಿಂದ ಯಾತ್ರೆಯಲ್ಲಿ ತರಲಾಗಿದ್ದ ಪವಿತ್ರ ಕಾವೇರಿ ತೀರ್ಥವನ್ನು ಕಾವೇರಿ-ಬಂಗಾಳಕೊಲ್ಲಿ ಸಮುದ್ರ ಸಂಗಮದಲ್ಲಿ ಸಮರ್ಪಿಸಿ, ಸ್ವಚ್ಛ ಕಾವೇರಿ ಹಾಗೂ ನಾಡಿನ ಶಾಂತಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು.
ಯಾತ್ರೆಯ ಸಂದರ್ಭದಲ್ಲಿ ತಲಕಾವೇರಿಯಿಂದ ಕಳಸಗಳಲ್ಲಿ ತರಲಾಗಿದ್ದ ಪವಿತ್ರ ಕಾವೇರಿ ಜಲಕ್ಕೆ ವಿಶೇಷ ಹೋಮ, ಹವನ ಹಾಗೂ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ಬಳಿಕ ಸಮುದ್ರ ಸಂಗಮದಲ್ಲಿ ಸಮರ್ಪಿಸಲಾಯಿತು.
ಕಾವೇರಿ ಜಲಾನಯನ ಪ್ರದೇಶಗಳಲ್ಲಿ ನದಿ ಸಂರಕ್ಷಣೆಗೆ ಅಗತ್ಯ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವಂತೆ ಕರ್ನಾಟಕ ಮತ್ತು ತಮಿಳುನಾಡು ರಾಜ್ಯ ಸರ್ಕಾರಗಳು ಹಾಗೂ ಕೇಂದ್ರ ಸರ್ಕಾರವನ್ನು ಆಗ್ರಹಿಸುವ ನಿರ್ಣಯಗಳನ್ನು ಸಮಾರಂಭದಲ್ಲಿ ಕೈಗೊಳ್ಳಲಾಯಿತು.
ಅಖಿಲ ಭಾರತ ಸನ್ಯಾಸಿಗಳ ಸಂಘದ ಶ್ರೀ ಆತ್ಮಾನಂದ ಸ್ವಾಮೀಜಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಯಾತ್ರೆಯ ಉದ್ದೇಶ ಹಾಗೂ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಒಂದು ತಿಂಗಳ ಯಾತ್ರೆಯ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಅಖಿಲ ಭಾರತ ಸನ್ಯಾಸಿಗಳ ಸಂಘದ ಪ್ರಮುಖರಾದ ಶ್ರೀ ಶಿವರಾಮನಂದ ಸ್ವಾಮೀಜಿ ಹಾಗೂ ಕಾರ್ಯಕ್ರಮ ಸಂಯೋಜಕರಾದ ಶ್ರೀ ಬಾಲ ರಘುನಾಥನಂದ ಸ್ವಾಮೀಜಿ ಕೃತಜ್ಞತೆ ಸಲ್ಲಿಸಿ, ಸನ್ಮಾನಿಸಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ಅಖಿಲ ಭಾರತೀಯ ಸನ್ಯಾಸಿಗಳ ಸಂಗಮದ ವತಿಯಿಂದ 2028ರಲ್ಲಿ ಕುಂಭಕೋಣಂನಲ್ಲಿ ಆಯೋಜಿಸಲಾಗುತ್ತಿರುವ ಮಹಾ ಕುಂಭಮೇಳದ ಕರಪತ್ರವನ್ನು ಸಂಘದ ಅಧ್ಯಕ್ಷರಾದ ಶ್ರೀ ರಾಮನಂದ ಕುಮಾರ ಗುರುಪರ ಸ್ವಾಮೀಜಿ ಹಾಗೂ ಇತರ ಸಾಧು-ಸಂತರು ಬಿಡುಗಡೆಗೊಳಿಸಿದರು.
ಮೌನ ವ್ರತದಲ್ಲಿದ್ದ ಅಖಿಲ ಭಾರತ ಸನ್ಯಾಸಿಗಳ ಸಂಗಮದ ಸ್ಥಾಪಕರಾದ ಶ್ರೀ ರಾಮನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು.
ಸಮಾರೋಪ ಸಮಾರಂಭದಲ್ಲಿ ಕುಶಾಲನಗರದ ಕಾವೇರಿ ರಿವರ್ ಸೇವಾ ಟ್ರಸ್ಟ್‌ನ ಪ್ರಮುಖರಾದ ಕೆ.ಜಿ. ಮನು, ಕಾವೇರಿ ಆರತಿ ಬಳಗದ ಮಂಜುನಾಥ್, ಶಿವಾಜಿ ರಾವ್, ಆತ್ಮಾನಂದ, ರಾಜು, ಸುಮನ್, ನವೀನ್ ಕುಮಾರ್ ಸೇರಿದಂತೆ ಜಿಲ್ಲೆಯ 12 ಮಂದಿ ಭಾಗವಹಿಸಿದ್ದರು.
















