ಮಡಿಕೇರಿ, NEWS DESK ನ.18: 2025-26ನೇ ಸಾಲಿನಲ್ಲಿ ವಿಶ್ವಬ್ಯಾಂಕ್ ನೆರವಿನ ರ್ಯಾಂಪ್ (RAMP) ಯೋಜನೆಯಡಿ ಕೊಡಗು ಜಿಲ್ಲೆಯ ಹೊಸ ಉತ್ಪಾದನಾ ಆಧಾರಿತ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕಾ ಘಟಕಗಳಿಗೆ ಬಡ್ಡಿ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಕೇಂದ್ರ ಸರ್ಕಾರದ ಎಂಎಸ್ಎಂಇ ಸಚಿವಾಲಯ ಹಾಗೂ ರಾಜ್ಯ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸಹಯೋಗದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಸೆಪ್ಟೆಂಬರ್ 4, 2024ರಂದು ಅಥವಾ ನಂತರ ವಾಣಿಜ್ಯ ಉತ್ಪಾದನೆ ಆರಂಭಿಸಿರುವ ಹೊಸ ಉತ್ಪಾದನಾ ಆಧಾರಿತ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕಾ ಘಟಕಗಳು ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅರ್ಹವಾಗಿವೆ. ವ್ಯಾಪಾರ ಮತ್ತು ಸೇವಾ ವಲಯದ ಘಟಕಗಳಿಗೆ ಈ ಸೌಲಭ್ಯ ಅನ್ವಯಿಸುವುದಿಲ್ಲ.
ಯೋಜನೆಯಡಿ ಗರಿಷ್ಠ ರೂ.1 ಕೋಟಿ ಅವಧಿ ಸಾಲಕ್ಕೆ ಮೊದಲ 12 ತಿಂಗಳ ಬಡ್ಡಿಯಲ್ಲಿ ಶೇ.6ರಷ್ಟು ಅಥವಾ ಗರಿಷ್ಠ ರೂ.6 ಲಕ್ಷ (ಇವೆರಡರಲ್ಲಿ ಯಾವುದು ಕಡಿಮೆಯೋ ಅಷ್ಟು) ಮೊತ್ತವನ್ನು ಒಂದು ಬಾರಿಯ ಬಡ್ಡಿ ಸಹಾಯಧನವಾಗಿ ನೇರವಾಗಿ ಸಾಲದ ಖಾತೆಗೆ ಜಮೆ ಮಾಡಲಾಗುತ್ತದೆ.
ಆಸಕ್ತ ಹೊಸ ಉದ್ಯಮಿಗಳು ಸಂಬಂಧಪಟ್ಟ ಬ್ಯಾಂಕ್ ಶಾಖೆಯ ಮೂಲಕ ಜಿಲ್ಲಾ ಕೈಗಾರಿಕಾ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರ ಕಚೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಕೊಹಿನೂರ್ ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ–571201 ಅಥವಾ ದೂರವಾಣಿ ಸಂಖ್ಯೆಗಳಾದ 08272-228746, 7975556779, 8553226664 ಹಾಗೂ 9845596252 ಸಂಪರ್ಕಿಸುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.















