ವಿರಾಜಪೇಟೆ, NEWS DESK ನ.18: 2027ನೇ ಸಾಲಿನ ಕೊಡವ ಹಾಕಿ ಉತ್ಸವವನ್ನು ಈ ಬಾರಿ ಪ್ರತಿಷ್ಠಿತ ಅಜ್ಜಿಕುಟ್ಟಿರ ಕುಟುಂಬಸ್ಥರು ಆಯೋಜಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಉತ್ಸವದ ಪೂರ್ವಭಾವಿ ಸಭೆಯು ವಿರಾಜಪೇಟೆಯ ಶಾಸಕರ ಗೃಹ ಕಚೇರಿಯಲ್ಲಿ ನಡೆಯಿತು.
ಹಾಕಿ ಉತ್ಸವದ ಆಯೋಜನಾ ಸಮಿತಿಯ ಗೌರವಾಧ್ಯಕ್ಷ ಹಾಗೂ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಇದೇ ತಿಂಗಳ 22ರಂದು ಬೆಂಗಳೂರಿನ ಹಾಕಿ ಸಂಸ್ಥೆಯ ಸಭಾಂಗಣದಲ್ಲಿ ನಡೆಯಲಿರುವ ಕೊಡವ ಹಾಕಿ ಉತ್ಸವದ ಲಾಂಛನ ಬಿಡುಗಡೆ ಸಮಾರಂಭದ ಪೂರ್ವಭಾವಿ ಸಿದ್ಧತೆಗಳ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು.
ಉತ್ಸವದ ರೂಪುರೇಷೆಗಳು, ಕಾರ್ಯಕ್ರಮದ ಆಯೋಜನೆ ಹಾಗೂ ಲಾಂಛನ ಬಿಡುಗಡೆ ಸಮಾರಂಭವನ್ನು ಯಶಸ್ವಿಯಾಗಿ ನಡೆಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಸಲಹೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಅಜ್ಜಿಕುಟ್ಟಿರ ಕುಟುಂಬದ ಅಧ್ಯಕ್ಷ ಸಜನ್ ಚೆಂಗಪ್ಪ, ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡಂಡ ಕೆ. ಬೋಪಣ್ಣ, ಅಜ್ಜಿಕುಟ್ಟಿರ ಹಾಕಿ ನಮ್ಮೆಯ ಕಾರ್ಯದರ್ಶಿ ಪೂಣಚ್ಚ, ಕೊಡವ ಹಾಕಿ ಅಕಾಡೆಮಿಯ ಕಾರ್ಯಾಧ್ಯಕ್ಷ ಹಾಗೂ ಒಲಿಂಪಿಯನ್ ಚೆಪ್ಪುಡೀರ ಪೂಣಚ್ಚ, ಕಾರ್ಯದರ್ಶಿ ಕುಲೇಟೀರ ಅರುಣ್ ಬೇಬ, ಸಹ ಕಾರ್ಯದರ್ಶಿ ನಾಯಕಂಡ ದೀಪಕ್ ಚಿನ್ನಪ್ಪ, ನಿರ್ದೇಶಕರಾದ ಕಲಿಯಂಡ ಸಂಪನ್ ಅಯ್ಯಪ್ಪ ಹಾಗೂ ರಾಕಿ ಪೂವಣ್ಣ ಸೇರಿದಂತೆ ಅಜ್ಜಿಕುಟ್ಟಿರ ಕುಟುಂಬದ ಆಯೋಜಕರು, ಉಪಾಧ್ಯಕ್ಷರು, ಪದಾಧಿಕಾರಿಗಳು ಮತ್ತು ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
















