ಮಡಿಕೇರಿ, ನ.24 NEWS DESK : ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜಿನ ಸೂಕ್ಷ್ಮಜೀವವಿಜ್ಞಾನ ವಿಭಾಗದ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಶೋಭಾ ಎಂ.ಎಸ್. ಅವರು ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರೇಡ್-1 ಖಾಯಂ ಪ್ರಾಂಶುಪಾಲರಾಗಿ ನೇಮಕಗೊಂಡಿದ್ದು, ನ.24ರಂದು ಅಧಿಕಾರ ಸ್ವೀಕರಿಸಿದರು. ಕರ್ನಾಟಕ ಸರ್ಕಾರದ ವತಿಯಿಂದ ನಡೆದ ಸ್ಪರ್ಧಾತ್ಮಕ ಆಯ್ಕೆ ಪ್ರಕ್ರಿಯೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ಡಾ. ಶೋಭಾ ಅವರು, ಒಟ್ಟು 215 ಪ್ರಾಂಶುಪಾಲರ ಹುದ್ದೆಗಳ ನೇಮಕಾತಿಯಲ್ಲಿ ಆಯ್ಕೆಯಾಗಿದ್ದಾರೆ. ಶಿವಶಂಕರ್ ಮತ್ತು ಕಮಲಮ್ಮ ದಂಪತಿಯ ಪುತ್ರಿಯಾದ ಡಾ. ಶೋಭಾ ಅವರ ತಂದೆ ರಾಜ್ಯ ಪುರಾತತ್ವ ಇಲಾಖೆಯ ನಿರ್ದೇಶಕರಾಗಿ ಹಾಗೂ ಚಾಮರಾಜ ಅಕಾಡೆಮಿ ಆಫ್ ವಿಷುವಲ್ ಆರ್ಟ್ಸ್ನ ಡೀನ್ ಆಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಆಯ್ಕೆಯಾದ ಡಾ. ಶೋಭಾ ಅವರು 2006ರಲ್ಲಿ ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದರು. ಸುಮಾರು 16 ವರ್ಷಗಳ ಕಾಲ ಇಲ್ಲಿ ಸೇವೆ ಸಲ್ಲಿಸಿದ ಅವರು, 2019ರಲ್ಲಿ ಸಹ ಪ್ರಾಧ್ಯಾಪಕರಾಗಿ ಬಡ್ತಿ ಪಡೆದರು. ನಂತರ ಚಿಂತಾಮಣಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ವರ್ಗಾವಣೆಯಾಗಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಬಳಿಕ ಮೈಸೂರಿಗೆ ಮರಳಿದ ಅವರು, ಮಹಾರಾಣಿ ವಿಜ್ಞಾನ ಕಾಲೇಜಿನ ಸೂಕ್ಷ್ಮಜೀವವಿಜ್ಞಾನ ವಿಭಾಗದ ಮುಖ್ಯಸ್ಥೆಯಾಗಿ ಹಾಗೂ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸುಮಾರು 21 ವರ್ಷಗಳ ಬೋಧನಾ ಅನುಭವ ಹೊಂದಿರುವ ಡಾ. ಶೋಭಾ ಅವರು ಇದೀಗ ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರೇಡ್-1 ಖಾಯಂ ಪ್ರಾಂಶುಪಾಲರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಖ್ಯಾತ ವಕೀಲರಾದ ಡಾ. ಮನೋಜ್ ಬೋಪಯ್ಯ ಯಲದಾಳು ಅವರ ಧರ್ಮಪತ್ನಿಯಾಗಿರುವ ಡಾ. ಶೋಭಾ ಅವರು, ದಿವಂಗತ ವೈ.ಟಿ. ಬೋಪಯ್ಯ ಮತ್ತು ದಿವಂಗತ ಕಮಲಾ ಬೋಪಯ್ಯ ಅವರ ಸೊಸೆಯಾಗಿದ್ದಾರೆ. ಅವರ ನೇಮಕಾತಿಗೆ ಕುಟುಂಬದವರು, ಸಹೋದ್ಯೋಗಿಗಳು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಡಾ. ಶೋಭಾ ಅವರ ಅಪಾರ ಬೋಧನಾ ಅನುಭವ ಹಾಗೂ ಮಾರ್ಗದರ್ಶನದಿಂದ ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ದೊರೆಯಲಿದೆ ಎಂಬ ಆಶಯ ವ್ಯಕ್ತವಾಗಿದೆ.


















