ಕಾರ್ಮಿಕರ ಬೇಡಿಕೆಗಳಿಗೆ ಬಜೆಟ್ ನಲ್ಲಿ ಆದ್ಯತೆ ನೀಡಲು ಒತ್ತಾಯ : ಮಡಿಕೇರಿಯಲ್ಲಿ ಪ್ರತಿಭಟನೆ

ಮಡಿಕೇರಿ ಫೆ.10 : ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಅನುಗುಣವಾಗಿ ಕನಿಷ್ಠ ವೇತನ ನಿಗಧಿ ಮಾಡಬೇಕು ಸೇರಿದಂತೆ ಕಾರ್ಮಿಕರ ವಿವಿಧ ಬೇಡಿಕೆಗಳಿಗೆ ಕರ್ನಾಟಕ ರಾಜ್ಯ ಸರ್ಕಾರ ಮಂಡಿಸುವ ಬಜೆಟ್‌ನಲ್ಲಿ ಆದ್ಯತೆ ನೀಡಬೇಕೆಂದು ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಕೊಡಗು ಜಿಲ್ಲಾ ಸಮಿತಿ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಸಂಘಟನೆಯ ಪ್ರಮುಖರು ಹಾಗೂ ಕಾರ್ಯಕರ್ತರು, ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಮಾತನಾಡಿ, ಸಂಪತ್ತನ್ನು ಸೃಷ್ಟಿಸುವ ಭೌತಿಕ-ದೈಹಿಕ ಶ್ರಮಿಕರು ಬಂಡವಾಳಗಾರರ ಪರವಾಗಿ ರೂಪಿತವಾದ ನೀತಿಗಳಿಂದ ಹಲವು ರೀತಿಯಲ್ಲಿ ಸಂಕಷ್ಟಕ್ಕೊಳಗಾಗಿದ್ದಾರೆ. ಕೆಲಸದ ಭದ್ರತೆಗಿಂತ ಉದ್ದಿಮೆಗಳ ಭದ್ರತೆ ಆದ್ಯತೆಯಾಗಿದೆ. ಉದ್ಯೋಗಗಳಿಗೆ ದೀರ್ಘಾವಧಿಯ ಭದ್ರತೆ ಇಲ್ಲದಂತಾಗಿದೆ. ಮುಷ್ಕರದ ಹಕ್ಕು ಮತ್ತು ಸಾಮೂಹಿಕ ಚೌಕಾಸಿಯ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ ಎಂದು ಆರೋಪಿಸಿದರು.
::: ಬೇಡಿಕೆಗಳು :::
ಎಲ್ಲಾ ರೀತಿಯ ಶ್ರಮಿಕ ಜೀವಿಗಳ ಕನಿಷ್ಠ ವೇತನವನ್ನು ಬೆಲೆಯೇರಿಕೆಯ ಆಧಾರದಲ್ಲಿ 31 ಸಾವಿರ ರೂ.ಗಳೆಂದು ನಿಗಧಿ ಮಾಡಬೇಕು. ಕೇಂದ್ರದ ಶಾಸನಗಳ ನಿಯಮಾವಳಿಯನ್ನು ರಾಜ್ಯ ಸರ್ಕಾರ ಜಾರಿ ಮಾಡಬಾರದು, ಕಾರ್ಮಿಕರ ಪರವಾದ ಕಾನೂನುಗಳು ಜಾರಿಯಾಗಬೇಕು, ವಿದ್ಯುಚ್ಛಕ್ತಿ ಖಾಸಗೀಕರಣ ಕೈಬಿಡಬೇಕು, ವಿದ್ಯುತ್ ತಿದ್ದುಪಡಿ ಮಸೂದೆ 2020ನ್ನು ತಿರಸ್ಕರಿಸಬೇಕು, ಬೆಲೆ ಏರಿಕೆ ಆಧಾರದಲ್ಲಿ ತುಟ್ಟಿಭತ್ಯೆಯೊಂದಿಗೆ ಕಾರ್ಮಿಕರಿಗೆ ಸಮಾನ ಕನಿಷ್ಠ ವೇತನ 31 ಸಾವಿರ ಜಾರಿ ಮಾಡಬೇಕು, ಆಟೋ ಟ್ಯಾಕ್ಸಿ ಮುಂತಾದ ಅಸಂಘಟಿತ ಸಾರಿಗೆ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ರಚನೆಯಾಗಬೇಕು, ಅಸಂಘಟಿತ ಕಾರ್ಮಿಕರ ಭವಿಷ್ಯನಿಧಿ ಕರಡನ್ನು ಶಾಸನವನ್ನಾಗಿ ವಿಧಾನಸಭೆಯಲ್ಲಿ ಅಂಗೀಕರಿಸಬೇಕು, ಅದಕ್ಕೆ ಅಗತ್ಯವಿರುವ ಸೆಸ್ ಸಂಗ್ರಹಕ್ಕೆ ಸರ್ಕಾರ ಕ್ರಮವಹಿಸಬೇಕು, ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ರದ್ದು ಮಾಡಬೇಕು, ಸಾರ್ವಜನಿಕ ಉದ್ದಿಮೆಗಳ ಹಾಗೂ ಸೇವೆಗಳ ಖಾಸಗೀಕರಣದ ನೀತಿಗಳನ್ನು ಕೈಬಿಡಬೇಕು, ಕಾರ್ಮಿಕ ಸಂಘದ ಮಾನ್ಯತೆಗೆ ಹಾಗೂ ಗುತ್ತಿಗೆ ಮುಂತಾದ ತಾತ್ಕಾಲಿಕ ಕಾರ್ಮಿಕರ ಕೆಲಸದ ಖಾಯಂಮಾತಿಗೆ ಶಾಸನ ರೂಪಿಸಿ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ನಿಗಮ ಮಂಡಳಿ ಮತ್ತು ಇಲಾಖೆಗಳಲ್ಲಿ ದುಡಿಯುವ ಗುತ್ತಿಗೆ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ ಖಾಯಂ ಮಾಡಬೇಕು, ಗುತ್ತಿಗೆ ಕಾರ್ಮಿಕರ ನಿಯಂತ್ರಣಕ್ಕೆ ಅಗತ್ಯ ಕ್ರಮ ವಹಿಸಬೇಕು, ಎಲ್ಲಾ ಜಿಲ್ಲೆಗಳಲ್ಲೂ ಕಾರ್ಮಿಕ ನ್ಯಾಯಾಲಯಗಳನ್ನು ಸ್ಥಾಪಿಸಬೇಕು, ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಯುಕೆಜಿ ಪ್ರಾರಂಭಿಸಬೇಕು, ವೇತನ ಪರಿಷ್ಕರಣೆಯಾಗಬೇಕು, ಬಿಸಿಯೂಟ ನೌಕರರಿಗೆ ವೇತನ ಹೆಚ್ಚಳ ಮಾಡಬೇಕು, ಕಟ್ಟಡ ಸಾಮಾಗ್ರಿಗಳ ಮೇಲಿನ ಜಿಎಸ್‌ಟಿ ಕಡಿತ ಮಾಡಬೇಕು, ಕಸಗುಡಿಸುವವರಿಗೆ ಅನುಮೋದನೆ ನೀಡಬೇಕು ಮತ್ತು ಕನಿಷ್ಟ ವೇತನ ಪರಿಷ್ಕರಣೆ ಆಗಬೇಕು, ಎಲ್ಲಾ ಕಾರ್ಮಿಕರ ಸೇವೆಗಳನ್ನು ಖಾಯಂಗೊಳಿಸಬೇಕು, ಕಾರ್ಮಿಕರನ್ನು ನೇರ ಪಾವತಿ ಅಡಿಯಲ್ಲಿ ಸಂಬಳ ಪಾವತಿ ಮಾಡಬೇಕು, ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕರಿಗೆ ಸರ್ಕಾರಿ ನೌಕರರಷ್ಟು ಸಮಾನ ವೇತನ ಪರಿಷ್ಕರಣೆ ಮಾಡಬೇಕು, ಮುಷ್ಕರ ಸಂದರ್ಭ ವಜಾಗೊಂಡ ಎಲ್ಲಾ ಕಾರ್ಮಿಕರನ್ನು ಷರತ್ತಿಲ್ಲದೆ ಪುನರ್ ನೇಮಕಮಾಡಬೇಕು, ಬೀಡಿ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು, ಕಾರ್ಮಿಕರಿಗೆ ಪ್ರತ್ಯೇಕ ಕಲ್ಯಾಣ ಮಂಡಳಿ ಸ್ಥಾಪಿಸಿ ಮನೆ, ಶಿಕ್ಷಣ, ಆರೋಗ್ಯ, ಶಿಕ್ಷಣ ಸೌಲಭ್ಯಗಳನ್ನು ಜಾರಿ ಮಾಡಬೇಕೆಂದು ಆಗ್ರಹಿಸಿದರು.
ಸಂಘಟನೆಯ ಜಿಲ್ಲಾ ಖಜಾಂಚಿ ಎನ್.ಡಿ.ಕುಟ್ಟಪ್ಪ, ಉಪಾಧ್ಯಕ್ಷ ಹೆಚ್.ಬಿ.ರಮೇಶ್, ಉಪ ಕಾರ್ಯದರ್ಶಿಗಳಾದ ಕೆ.ಎಸ್.ಪ್ರತೀಶ್, ಕೆ.ಎಸ್.ಸಾಜಿ ರಮೇಶ್, ರಾಚಪ್ಪಾಜಿ, ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಬೇಡಿಕೆಯ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.
