Advertisement
5:09 AM Friday 8-December 2023

ಮಾತೃಭಾಷಾ ದಿನಾಚರಣೆಯಂದು ಸಿಎನ್‌ಸಿ ಸತ್ಯಾಗ್ರಹ

10/02/2023

ಮಡಿಕೇರಿ ಫೆ.10 : ಸಂವಿಧಾನದ 8 ನೇ ಶೆಡ್ಯೂಲ್‌ಗೆ ಕೊಡವ ತಕ್ (ಕೊಡವ ಭಾಷೆ) ನ್ನು ಸೇರಿಸಬೇಕೆಂದು ಒತ್ತಾಯಿಸಿ ಅಂತರರಾಷ್ಟ್ರೀಯ ಮಾತೃಭಾಷಾ ದಿನವಾದ ಫೆ.21 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಸತ್ಯಾಗ್ರಹ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಅಂದು ಬೆಳಗ್ಗೆ 10.30 ಗಂಟೆಯಿoದ 11.30 ರವರೆಗೆ ಸತ್ಯಾಗ್ರಹ ನಡೆಯಲಿದ್ದು, ಅತ್ಯಂತ ಸೂಕ್ಷ್ಮ ಜನಾಂಗವಾಗಿರುವ ಕೊಡವರ ಮಾತೃಭಾಷೆ ಕೊಡವ ತಕ್ ಗೆ ಸಂವಿಧಾನದ ಭದ್ರತೆ ನೀಡಬೇಕೆಂದು ಒತ್ತಾಯಿಸಿ ಸರ್ಕಾರದ ಗಮನ ಸೆಳೆಯಲಾಗುವುದೆಂದು ತಿಳಿಸಿದ್ದಾರೆ.
ಕೊಡವ ಭಾಷೆಯನ್ನು ಅಧಿಕೃತವೆಂದು ಘೋಷಿಸಿ ಕೊಂಕಣಿ ಭಾಷೆಯ ಮಾದರಿಯಲ್ಲಿ ರಾಜ್ಯದ 3ನೇ ಆಡಳಿತ ಭಾಷೆಯನ್ನಾಗಿ ಮಾಡಬೇಕು. ಸಂವಿಧಾನದ 345, 350, 350 ಎ, 350 ಬಿ ವಿಧಿಯಡಿ 1ನೇ ತರಗತಿಯಿಂದಲೇ ಪಠ್ಯಕ್ರಮದಲ್ಲಿ ಕೊಡವ ತಕ್ ನ್ನು ಕಡ್ಡಾಯಗೊಳಿಸಬೇಕು. ವಿಶ್ವಸಂಸ್ಥೆಯ ಅಧಿಕೃತ ಭಾಷೆ ಎಂದು ಘೋಷಿಸಬೇಕು, ಪ್ರಾಚೀನ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಕೊಡವ ತಕ್ ಅಧ್ಯಯನ ಪೀಠ ಸ್ಥಾಪಿಸಬೇಕು. ರಾಜ್‌ಗೀರ್‌ನ ನಳಂದಾ, ಟೋಕಿಯೊದ ಯುಎನ್ ವಿಶ್ವವಿದ್ಯಾಲಯ, ಅಮರಕಂಟಕ್‌ನ ಇಂದಿರಾ ಗಾಂಧಿ ಬುಡಕಟ್ಟು ವಿಶ್ವವಿದ್ಯಾಲಯ, ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯ ಮತ್ತು ತಿರುವನಂತಪುರ ದ್ರಾವಿಡ ಭಾಷಾ ಸಂಶೋಧನಾ ಸಂಸ್ಥೆಯಲ್ಲಿ ಕೊಡವ ಭಾಷಾ ಅಧ್ಯಯನ ಕೇಂದ್ರ ಹಾಗೂ ಮಡಿಕೇರಿಯಲ್ಲಿ ವಿಶ್ವ ಕೊಡವಾಲಜಿ ಅಧ್ಯಯನ ಕೇಂದ್ರ ಸ್ಥಾಪಿಸಬೇಕು.
ಕೊಡವ ತಕ್ ನ್ನು ಯುಎನ್‌ಒ ಅಧಿಕೃತ ಭಾಷೆಗಳಲ್ಲಿ ಒಂದನ್ನಾಗಿ ಮಾಡಬೇಕು. ಭವ್ಯ ಸಂಸ್ಕೃತಿಯ ಕೊಡವ ಜಾನಪದ ಪರಂಪರೆಯನ್ನು ವಿಶ್ವ ಸಂಸ್ಥೆಯ ಯುನೆಸ್ಕೊ ಅಮೂರ್ತ ಸಾಂಸ್ಕೃತಿಕ ಪಟ್ಟಿಯಲ್ಲಿ ಸೇರಿಸಬೇಕು, ಕೊಡವ ಭಾಷಾ ಬುಡಕಟ್ಟು ಜನಾಂಗದ ಗನ್ ಸಂಸ್ಕೃತಿ ಅಂದರೆ ಕೊಡವ ಜನಾಂಗೀಯ ಸಂಸ್ಕಾರವನ್ನು ಸಿಖ್ಖರ ಕಿರ್ಪಾನ್‌ಗೆ ಸಮಾನವಾಗಿ ನಮ್ಮ ಸಂವಿಧಾನದ 25 ಮತ್ತು 26 ನೇ ವಿಧಿಯಡಿ ರಕ್ಷಿಸಬೇಕು.
ಕೊಡವ ಭಾಷಾ ಜನಾಂಗದ ಸಮಗ್ರ ಸಬಲೀಕರಣಕ್ಕಾಗಿ ಜಲ, ನೆಲ, ಭಾಷೆ, ಸಾಂಸ್ಕೃತಿಕ ಪರಂಪರೆ, ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ್ಯ ನೀಡುವ ಕೊಡವ ಸಾಂಪ್ರದಾಯಿಕ ಮತ್ತು ಅವಿಭಾಜ್ಯ ತಾಯಿನಾಡು ಕೊಡವಲ್ಯಾಂಡ್ ನ್ನು ಖಾತರಿ ಪಡಿಸಬೇಕು. ಸಂವಿಧಾನದ ಆರ್ಟಿಕಲ್ 244 R/ w 6ನೇ ಮತ್ತು 8ನೇ ಶೆಡ್ಯೂಲ್ ಅಡಿಯಲ್ಲಿ ಭೂ-ರಾಜಕೀಯ ಸ್ವಾಯತ್ತತೆ ಮತ್ತು ಎಸ್‌ಟಿ ಟ್ಯಾಗ್‌ನೊಂದಿಗೆ ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕುಗಳನ್ನು ನೀಡಬೇಕೆಂದು ಸತ್ಯಾಗ್ರಹದಲ್ಲಿ ಒತ್ತಾಯಿಸುವುದಾಗಿ ನಾಚಪ್ಪ ತಿಳಿಸಿದ್ದಾರೆ.