Advertisement
2:38 AM Saturday 2-December 2023

“3ನೇ ಮಹಾಯುದ್ಧ ನಿಲ್ಲಿಸಿ” : ಮಡಿಕೇರಿಯಲ್ಲಿ ಶಾಂತಿಯುತ ಜಾಗೃತಿ ಅಭಿಯಾನ

11/02/2023

ಮಡಿಕೇರಿ ಫೆ.11 : ಅಹ್ಮದಿಯಾ ಮುಸ್ಲಿಂ ಜಮಾಅತ್ ವತಿಯಿಂದ “3ನೇ ಮಹಾಯುದ್ಧವನ್ನು ನಿಲ್ಲಿಸಿ” ಎಂಬ ವಿಷಯದಡಿ ಮಡಿಕೇರಿಯಲ್ಲಿ ಶಾಂತಿಯುತ ಜಾಗೃತಿ ಅಭಿಯಾನ ನಡೆಯಿತು.
ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ವಿಶ್ವದ ಶಾಂತಿ ಮತ್ತು ಭದ್ರತೆಗೆ ಆದ್ಯತೆ ನೀಡುವ ಅಂಶಗಳ ಭಿತ್ತಿಚಿತ್ರಗಳನ್ನು ಪ್ರದರ್ಶಿಸಿ ಅರಿವು ಮೂಡಿಸಲಾಯಿತು.
ಈ ಸಂದರ್ಭ ಸಂಘಟನೆಯ ಮಡಿಕೇರಿ ಅಧ್ಯಕ್ಷ ಜಿ.ಎಂ.ಮೊಹಮ್ಮದ್ ಷರೀಫ್ ಮಾತನಾಡಿ, ಅಹ್ಮದಿಯಾ ಮುಸ್ಲಿಂ ಜಮಾಅತಿನ ಜಾಗತಿಕ ನೇತಾರ ಹಝ್‍ರತ್ ಮಿರ್ಝಾ ಮಸ್‍ರೂರ್ ಅಹ್ಮದ್ ಸಾಹಿಬ್ ಅವರ ನಿರ್ದೇಶನದ ಮೇರೆಗೆ ಅಹ್ಮದಿಯಾ ಮುಸ್ಲಿಂ ಜಮಾಅತ್ ವತಿಯಿಂದ “3ನೇ ಮಹಾಯುದ್ಧವನ್ನು ನಿಲ್ಲಿಸಿ” ಎಂಬ ವಿಷಯದಡಿ ಭಾರತದ ವಿವಿಧೆಡೆ ಶಾಂತಿಯುತ ಅಭಿಯಾನ ನಡೆಯುತ್ತಿದ್ದು, ಇದರ ಭಾಗವಾಗಿ ಮಡಿಕೇರಿ ನಗರದಲ್ಲೂ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಫೆ.12 ರಂದು ಶಾಂತಿ ಎಂಬ ವಿಷಯದ ಕುರಿತು ವಿಚಾರ ಸಂಕಿರಣ ನಡೆಯಲಿದ್ದು, ಮುಖ್ಯ ಭಾಷಣಕಾರರಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ, ನಿವೃತ್ತ ಏರ್ ಮಾರ್ಷಲ್ ಕೆ.ಸಿ.ನಂದ ಕಾರ್ಯಪ್ಪ, ಖ್ಯಾತ ವಕೀಲರು ಮತ್ತು ಲೇಖಕ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಹಾಗೂ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಪಂಚದಲ್ಲಿ ಮನುಕುಲ ನಾಶದ ಕಡೆ ಹೋಗಬಾರದು ಎಂಬ ಉದ್ದೇಶದಿಂದ “ಪ್ರೀತಿ ಎಲ್ಲರಲ್ಲು, ದ್ವೇಶವಿಲ್ಲ ಯಾರಲ್ಲು” ಎಂಬ ಸಂದೇಶದೊಂದಿಗೆ ವಿವಿಧೆಡೆ ಕಾರ್ಯಕ್ರವನ್ನು ಹಮ್ಮಿಕೊಂಡು ಶಾಂತಿ ಮೂಡಿಸಲು ಅಹ್ಮದಿಯಾ ಮುಸ್ಲಿಂ ಜಮಾಅತ್ ನಿರಂತರ ಪರಿಶ್ರಮ ಪಡುತ್ತಿದ್ದು, ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.
ಉಪಾಧ್ಯಕ್ಷ ಎಂ.ಬಿ ಜಹೀರ್ ಅಹಮದ್ ಮಾತನಾಡಿ, ಪ್ರಪಂಚ ಇಂದು ವಿನಾಶದತ್ತ ಹೋಗುತ್ತಿವೆ. ಮಾನವ ಕೂಲದೊಂದಿಗೆ ಪ್ರೀತಿ, ವಾತ್ಸಲ್ಯ ಇಲ್ಲದಿದ್ದರೆ ದೇಶದಿಂದ ದೇಶಕ್ಕೆ ಹಗೆತನ ಹೆಚ್ಚಾಗುತ್ತದೆ. ಪ್ರಪಂಚದಲ್ಲಿ ಶಾಂತಿಯುತ, ಸಹಬಾಳ್ವೆಯಿಂದ ಬದುಕುವುದನ್ನು ನಾವು ಬಯಸುತ್ತೇವೆ. ಆದ್ದರಿಂದ ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಹೇಲ್ ಅಹ್ಮದ್ ಸಾಹೇಬ್, ಧರ್ಮ ಗುರುಗಳಾದ ಮೌಲಾನ ಕಲೀಂ ಕಾನ್ ಸಾಹೇಬ್, ಉಸಾಮ್ ಅಹ್ಮದ್ ಸಾಹೇಬ್ ಹಾಗೂ ಸಮಿತಿ ಸದಸ್ಯರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.
ಇದೇ ಸಂದರ್ಭ ಶಾಂತಿ ಸ್ಥಾಪನೆಯ ಸುವರ್ಣ ತತ್ವಗಳು ಎಂಬ ಕರಪತ್ರಗಳನ್ನು ವಿತರಿಸಲಾಯಿತು.