ಫೆ.18 ರಂದು ಶ್ರೀರಾಜರಾಜೇಶ್ವರಿ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿವಿಧ ಪೂಜೆ

ಮಡಿಕೇರಿ ಫೆ.11 : ಮಡಿಕೇರಿಯ ಕರ್ಣಂಗೇರಿ ಗ್ರಾಮದಲ್ಲಿರುವ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಫೆ.18 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ ಎಂದು ದೇವಾಲಯ ಧರ್ಮದರ್ಶಿ ಗೋವಿಂದಸ್ವಾಮಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 9 ಗಂಟೆಯಿಂದ ಅಂದು ಬೆಳಿಗ್ಗೆ 9 ಗಂಟೆಯಿಂದ ಕಾಶಿಲಿಂಗಕ್ಕೆ ಕ್ಷೀರಾಭಿಷೇಕ ಹಾಗೂ ಪಂಚಾಮೃತ ಅಭಿಷೇಕ ನಡೆಯಲಿದೆ.
ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ನಂತರ ಭಕ್ತಾಧಿಗಳಿಂದ ಪಂಚಲಿಂಗಕ್ಕೆ ಪವಿತ್ರ ಗಂಗಾಜಲದಿಂದ ಅಭಿಷೇಕ ಮತ್ತು ಶಿವನ ಮೂರ್ತಿಗೆ ಪುಷ್ಪಾರ್ಚನೆಯಾಗಲಿದೆ. ಸಂಜೆ 7 ಗಂಟೆಗೆ ಭಕ್ತಾಧಿಗಳಿಗೆ ದೀಪಾಲಂಕಾರ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ರಾತ್ರಿ 8 ಗಂಟೆಗೆ ತಾಯಿಯ ದರ್ಶನ ಇರುತ್ತದೆ.
ಮಧ್ಯಾಹ್ನ ಹಾಗೂ ರಾತ್ರಿ ಭಕ್ತರಿಗೆ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸಂಜೆ ಭಕ್ತಿ ಪ್ರಧಾನ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾತ್ರಿ 9 ಗಂಟೆಗೆ ನೆಲ್ಚಿಬೊಳಿ ಕೊಡವ ಚಲನಚಿತ್ರ ಪ್ರದರ್ಶನ ಇರಲಿದೆ ಎಂದರು. ಆಡಳಿತ ಮಂಡಳಿ ಪ್ರಮುಖರಾದ ಮಣಿ ದೇವರಾಜ್ ಮಾತನಾಡಿ, ದೇವಾಲಯದಲ್ಲಿ ಸ್ಥಾಪಿಸಲಾಗಿರುವ 52 ಅಡಿ ಎತ್ತರದ ಶಿವನ ವಿಗ್ರಹವನ್ನು 2016ರ ಮಾರ್ಚ್ 4 ರಂದು ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮಭೂಷಣ, ಕರ್ನಾಟಕ ರತ್ನ ಡಾ.ಶ್ರೀವೀರೇಂದ್ರ ಹೆಗ್ಗಡೆ ಲೋಕಾರ್ಪಣೆಗೊಳಿಸಿದರು. ಗರ್ಭಗುಡಿಯಲ್ಲಿ ಕಾಶಿಲಿಂಗ ಪ್ರತಿಷ್ಠಾಪನೆಯಾಗಿದ್ದು, ವಿಗ್ರಹದ ಸುತ್ತ ಪಂಚಲಿಂಗಗಳು ಮತ್ತು 109 ಲಿಂಗಗಳನ್ನು ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಭಕ್ತರಾದ ಚುಮ್ಮಿ ದೇವಯ್ಯ ಮಾತನಾಡಿ, ಪ್ರತಿವರ್ಷವೂ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಈ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಪೂಜಾ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಭಕ್ತರಾದ ತಾರಾ ಪ್ರಸಾದ್ ಉಪಸ್ಥಿತರಿದ್ದರು.
