Advertisement
10:17 AM Sunday 3-December 2023

ಗೌಡಳ್ಳಿಯಲ್ಲಿ 8ನೇ ಕನ್ನಡ ಸಾಹಿತ್ಯ ಸಮ್ಮೇಳನ : ಕನ್ನಡ ಭಾಷೆ ಬೆಳವಣಿಗೆಗೆ ಶ್ರಮಿಸಲು ಕರೆ

11/02/2023

ಸೋಮವಾರಪೇಟೆ ಫೆ.11 : ಗೌಡಳ್ಳಿಯಲ್ಲಿ 8ನೇ ಸೋಮವಾರಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಗೌಡಳ್ಳಿ ಬಿಜಿಎಸ್ ಶಾಲಾ ಮೈದಾನದಲ್ಲಿ ಅರ್ಥಪೂರ್ಣವಾಗಿ ನೆರವೇರಿತು.
ಗೌಡಳ್ಳಿ, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮೀಣ ಭಾಗದ ಸಾವಿರಾರು ಮಂದಿ ಕನ್ನಡಾಭಿಮಾನಿಗಳು ಭಾಗವಹಿಸಿ ಕನ್ನಡ ಹಬ್ಬಕ್ಕೆ ಮೆರಗು ತಂದರು. ಗ್ರಾಮೀಣ ಭಾಗದ ರೈತಾಪಿ ವರ್ಗ ಸಮ್ಮೇಳನದ ಪೂರ್ಣ ಜವಾವ್ದಾರಿಯನ್ನು ವಹಿಸಿಕೊಂಡು ಮುನ್ನೆಡಿಸಿದರು.
ಬೆಳಿಗ್ಗೆ 8 ಗಂಟೆಗೆ ಸೋಮವಾರಪೇಟೆ ತಹಸೀಲ್ದಾರ್ ಎಸ್.ಎನ್.ನರಗುಂದ ಬಿಜಿಎಸ್ ಶಾಲಾ ಆವರಣದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಕ.ಸಾ.ಪ.ಜಿಲ್ಲಾಧ್ಯಕ್ಷ ಎಂ.ಪಿ.ಕೇಶವಕಾಮತ್, ಕನ್ನಡ ಧ್ಜಜ ಹಾಗೂ ತಾಲ್ಲೂಕು ಅಧ್ಯಕ್ಷ ಎಸ್.ಡಿ.ವಿಜೇತ್ ಕನ್ನಡ ಪರಿಷತ್ ಧ್ವಜಾರೋಹಣ ನೆರವೇರಿಸಿದರು.
ಐತಿಹಾಸಿಕ ಹಿನ್ನೆಲೆಯುಳ್ಳ ದೊಡ್ಡಮಳ್ತೆಯ ಹೊನ್ನಮ್ಮನ ಕೆರೆ ದೇವಾಲಯದಿಂದ ಗ್ರಾಮೀಣ ಯುವಕರು ಕನ್ನಡ ಬಾವುಟದೊಂದಿಗೆ ಬೈಕ್ ಜಾಥ ನಡೆಸಿ ಗಮನ ಸೆಳೆದರು. ಬೀಟಿಕಟ್ಟೆ ಜಂಕ್ಷನ್ ಸಮಾವೇಶಗೊಂಡ ಕನ್ನಡಾಭಿಮಾನಿಗಳು ಮೆರವಣಿಕೆಯಲ್ಲಿ ಪಾಲ್ಗೊಂಡು ಮೆರಗು ತಂದರು. ಸಮ್ಮೇಳನಾಧ್ಯಕ್ಷರ ಶ.ಗ.ನಯನತಾರಾ, ಸ್ಥಳೀಯ ಶಾಸಕರು, ಪರಿಷತ್ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವಕಾಮತ್, ತಾಲ್ಲೂಕು ಅಧ್ಯಕ್ಷ ಎಸ್.ಡಿ.ವಿಜೇತ್ ಅವರುಗಳನ್ನು ತೆರದ ವಾಹನದಲ್ಲಿ ಕುಳ್ಳರಿಸಿ ಪ್ರಮುಖ ಬೀದಿಗಳಲ್ಲಿ ಕರೆದೊಯ್ಯಲಾಯಿತು. ಪೂರ್ಣಕುಂಭ ಹೊತ್ತ ಮಹಿಳೆಯರು, ವಿವಿಧ ಸಾಂಸ್ಕøತಿಕ ಕಲಾ ತಂಡಗಳು, ಶಾಲಾ ವಿದ್ಯಾರ್ಥಿಗಳ ಬ್ಯಾಂಡ್ ತಂಡ ಜನರನ್ನು ಆಕರ್ಷಿಸಿತು.
ಗಣ್ಯರ ನೆನಪಿನ ವಿವಿಧ ದ್ವಾರಗಳನ್ನು ಗಣ್ಯರು ಉದ್ಘಾಟಿಸಿದರು. ಬೆಳ್ಳಿಯಪ್ಪಗೌಡ ನೆನಪಿನ ದ್ವಾರವನ್ನು ಎಸ್.ಬಿ.ಭರತ್ ಕುಮಾರ್ ಉದ್ಘಾಟಿಸಿದರು. ಹಾರಳ್ಳಿ ಶ್ರೀ ಚನ್ನಕೇಶವ ಸ್ವಾಮಿ ನೆನಪಿನ ದ್ವಾರವನ್ನು ಹಾರಳ್ಳಿ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಹೂವಣ್ಣ, ಹಿರಿಕರ ದಿ.ಜಿ.ಎ. ಸುಬ್ಬೇಗೌಡರ ನೆನಪಿನ ದ್ವಾರವನ್ನು ಜಿ.ಡಿ.ದಾಮೋಧರ್, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ನೆನಪಿನ ದ್ವಾರವನ್ನು ಬೀಟಿಕಟ್ಟೆ ಯುವಕ ಸಂಘದ ಜಯಾನಂದ, ಶ್ರೀ ಚೌಡೇಶ್ವರಿ ಯುವಕ ಸಂಘದ ನೆನಪಿನ ದ್ವಾರವನ್ನು ಮಧು, ದಿ.ವೆಂಕಟರಮಣಾಚಾರ್ಯ ನೆನಪಿನ ದ್ವಾರವನ್ನು ಬಿ.ಪಿ.ಮೊಗಪ್ಪ, ಪುಲಿಗೇರಿ ಬಸವೇಶ್ವರ ಸ್ವಾಮಿ ನೆನಪಿನ ದ್ವಾರವನ್ನು ಹರಪಳ್ಳಿ ರವೀಂದ್ರ, ಪಿ.ಕೆ.ರವಿ, ಬಿ.ಎಸ್.ಸುಂದರ್, ಜಿ.ಪಿ.ಸುನಿಲ್, ದಿ.ಗುರಪ್ಪ ಮಾಸ್ಟರ್ ನೆನಪಿನ ದ್ವಾರವನ್ನು ಗಿರಿಜ ಗುರಪ್ಪ, ದೊಡ್ಡಮಳ್ತೆ ಶ್ರೀ ಹೊನ್ನಮ್ಮ ತಾಯಿ ಪುಣ್ಯಕ್ಷೇತ್ರ ದ್ವಾರವನ್ನು ದೇವಾಲಯ ಸಮಿತಿ ಅಧ್ಯಕ್ಷ ವೀರೇಶ್, ಹಣಕೋಡು ಶ್ರೀ ಬಸವೇಶ್ವರ ಸ್ವಾಮಿ ನೆನಪಿನ ದ್ವಾರವನ್ನು ಡಿ.ಎಸ್.ಚಂದ್ರಪ್ಪ, ಕೂಗೇಕೋಡಿ ಕನ್ನಂಬಾಡಿಯಮ್ಮ ನೆನಪಿನ ದ್ವಾರವನ್ನು ಕೆ.ಬಿ.ಚಂದ್ರಶೇಖರ್, ದಿ.ವಿ.ಟಿ.ಈರಪ್ಪ ಅವರ ನೆನಪಿನ ಮುಖ್ಯದ್ವಾರವನ್ನು ಮುಖ್ಯಶಿಕ್ಷಕಿ ಮಿಲ್‍ಗ್ರೆಡ್ ಗೋನ್ಸಾಲ್ವೆಸ್, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ನೆನಪಿನ ದ್ವಾರವನ್ನು ಉದ್ಘಾಟಿಸಿದರು.
ಶ್ರೀ ಬಾಲಗಂಗಾಧರನಾಥ ಸ್ವಾಮಿ ಮುಖ್ಯ ವೇದಿಕೆಯಲ್ಲಿ ನಡೆದ ಸಮಾರಂಭವನ್ನು ಸ್ಥಳೀಯ ಶಾಸಕರು ಉದ್ಘಾಟಿಸಿದರು. ಗ್ರಾಮೀಣ ಭಾಗದಲ್ಲಿ ಕನ್ನಡವನ್ನು ಪಸರಿಸುವ ಉದ್ದೇಶದಿಂದ ಸಾಹಿತ್ಯ ಸಮ್ಮೇಳನಗಳು ಹಳ್ಳಿ ಕಡೆಗೆ ತೆರಳುತ್ತಿರುವುದು ಭಾಷೆಯ ಬೆಳವಣಿಗೆಗೆ ಸಹಕಾರಿಯಾಗಿದೆ. ಪ್ರತಿಯೋರ್ವರು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಕನ್ನಡ ಭಾಷೆ ಬೆಳವಣಿಗೆಗೆ ಶ್ರಮಿಸುವಂತಾಗಬೇಕು ಎಂದು ಕರೆ ನೀಡಿದರು.
ಪ್ರಾಸ್ತವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲಾಧ್ಯಕ್ಷ ಕನ್ನಡ ನಾಡಿನ ತೇರು ನಿರಂತರವಾಗಿ ಸಾಗಬೇಕು. ಬಹು ಸಂಸ್ಕೃತಿಯ ಈ ನಾಡಿನಲ್ಲಿ ಕನ್ನಡಕ್ಕೆ ಹೆಚ್ಚಿನ ಆಧ್ಯತೆ ಸಲ್ಲಬೇಕು. ಕನ್ನಡ ಪ್ರಾಚೀನ ಭಾಷೆಯಾಗಿದ್ದು, ಖಾಸಗೀಕರಣ, ಉದಾರೀಕರಣ ನಡುವೆಯೂ ಭಾಷೆ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಸಾಹಿತ್ಯ ಪರಿಷತ್ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸಮ್ಮೇಳನಗಳನ್ನು ನಡೆಸಿ ಯಶಸ್ವಿಯಾಗಿದೆ ಎಂದರು.
ಮಾಜಿ ಸಚಿವ ಬಿ.ಎ.ಜೀವಿಜಯ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ನಮ್ಮ ಮಾತೃಭಾಷೆಯನ್ನು ಉಳಿಸಿ ಬೆಳೆಸಲು ಎಲ್ಲರೂ ಶ್ರಮಪಡಬೇಕಾಗಿದೆ. ದೇಶದಲ್ಲಿ 5600 ಭಾಚೆಗಳಿವೆ ಇದರಲ್ಲಿ ಕೆಲವು ವಿನಾಶದ ಅಂಚಿನಲ್ಲಿವೆ. ಇಂತಹ ಸಂದರ್ಭದಲ್ಲಿ ನಮ್ಮನಾಳುವ ಆಡಳಿತ ವ್ಯವಸ್ಥೆ ಹಿಂದಿ ಭಾಷೆಯನ್ನು ಹೇರುವ ಮೂಲಕ ಭಾಷಾ ಸ್ವತಂತ್ರಕ್ಕೆ ಧಕ್ಕೆ ಉಂಟು ಮಾಡುತ್ತಿರುವುದು ದುರಂತ ಎಂದು ಹೇಳಿದರು.
ನಿಕಟಪೂರ್ವ ಅಧ್ಯಕ್ಷರಾದ ಹೆಬ್ಬಾಲೆ ಕೆ.ನಾಗೇಶ್ ಪರಿಷತ್ ಧ್ವಜವನ್ನು ಸಮ್ಮೇಳನಾಧ್ಯಕ್ಷರಾದ ನಯನತಾರ ಅವರಿಗೆ ಹಸ್ತಾಂತರಿಸಿ ಆಶಯ ನುಡಿಗಳನ್ನಾಡಿದರು. ಸಾಹಿತಿ ಬೆಸ್ಸೂರು ಮೋಹನ್ ಪಾಳೇಗಾರ್ ಬರೆದ ‘ವಲಸೆ ಹಕ್ಕಿಯ ಹಾಡುಪಾಡು’ ಮತ್ತು ಲೇಖಕಿ ಜಲಕಾಳಪ್ಪ ಬರೆದ ‘ಭರವಸೆಯ ಬೆಳಕು’ ಪುಸ್ತಕಗಳನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಬಿಡುಗಡೆಗೊಳಿಸಿದರು ಯುವ ಪೀಳಿಗೆ ಕನ್ನಡ ಧ್ವಜವನ್ನು ಹಿಡಿಯುವ ತಯಾರಿಯನ್ನು ಹಿರಿಯರು ಮಾಡಬೇಕಾಗಿದೆ. ಕೊಡಗಿನಲ್ಲಿ ಸಾಕಷ್ಟು ಮಹಿಳಾ ಬರಹಗಾರರು ಸೃಷ್ಟಿಯಾಗಿದ್ದಾರೆ. ಸಾಹಿತ್ಯ ಕ್ಷೇತ್ರಕ್ಕೆ ಮಹಿಳೆಯರ ಕೊಡುಗೆ ಅಪಾರವಾಗಿದೆ ಎಂದರು. ವೇದಿಕೆಯಲ್ಲಿ ಕ.ಸಾ.ಪ. ತಾಲ್ಲೂಕು ಅಧ್ಯಕ್ಷ ಎಸ್.ಡಿ.ವಿಜೇತ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ.ವಿಜಯ, ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಿ.ಜಿ.ಮಲ್ಲಿಕಾ, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಎಂ.ಬಿಂದು, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಆರ್.ಸುರೇಶ್, ಕ.ಸಾ.ಪ. ಕಾರ್ಯದರ್ಶಿ ಜ್ಯೋತಿ ಅರುಣ್, ಮತ್ತು ಗಣ್ಯರು, ಪರಿಷತ್ ಜಿಲ್ಲಾ ಮತ್ತು ತಾಲ್ಲೂಕು ಪದಾಧಿಕಾರಿಗಳು ಇದ್ದರು.

ಸಮ್ಮೇಳನಾಧ್ಯಕ್ಷರಾದ ಶ.ಗ.ನಯನತಾರ ಮಾತನಾಡಿ, ಸಮ್ಮೇಳನ ಏಕತೆಯ ಸಂಕೇತ. ಕನ್ನಡಾಭಿಮಾನಿಗಳನ್ನು, ಸಾಹಿತ್ಯಾಸಕ್ತರನ್ನು, ಕಲಾವಿದರನ್ನು ಒಂದುಗೂಡಿಸಿ, ಪ್ರೇರಣೆ ಹಾಗು ಜಾಗೃತಿ ಮೂಡಿಸಿ, ಕನ್ನಡ ಸಂಸ್ಕೃತಿಯನ್ನು ಬೆಳಗಿಸುತ್ತದೆ ಎಂದರು.
ಸರ್ಕಾರಿ ಕನ್ನಡ ಶಾಲೆಗಳನ್ನು ಅಭಿವೃದ್ಧಿಪಡಿಸುವ ಮೂಲಕವೂ ಭಾಷೆಯನ್ನು ಅರಳಿಸಬಹುದು, ಆದರೆ ಸರ್ಕಾರಿ ಶಾಲೆಗಳಲ್ಲೂ ಆಂಗ್ಲಮಾಧ್ಯಮ ಪ್ರಾರಂಭಿಸಿದ್ದರಿಂದ ಕನ್ನಡ ಭಾಷೆಯ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಇಂಗ್ಲೀಷ್ ಭಾಷೆ ಇರಲಿ ಆದರೆ ಕನ್ನಡಕ್ಕೆ ಪ್ರಥಮ ಅಧ್ಯತೆ ನೀಡಬೇಕು.
ಜಿಲ್ಲೆಯಲ್ಲಿ ಎಲೆಮರೆ ಕಾಯಿಯಂತಿರುವ ಗ್ರಾಮೀಣ ಭಾಗದ ಮಹಿಳಾ ಬರಹಗಾರರನ್ನು ಗುರುತಿಸಿ ಮಾರ್ಗದರ್ಶನ ನೀಡಬೇಕು. ಮಹಿಳಾ ಶೋಷಣೆ, ದೌರ್ಜನ್ಯಗಳಿಗೆ ಇತಿಶ್ರೀ ಹಾಡಬೇಕು. ಸಂಘಟಿತ ಮಹಿಳೆಯರು ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಎಂದರು.

ಗೌಡಳ್ಳಿಯಲ್ಲಿ ನಡೆದ 8ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಬಹಿರಂಗ ಅಧಿವೇಶನದಲ್ಲಿ ನಿರ್ಣಯಗಳನ್ನು ಸಭೆ ಅಂಗಿಕರಿಸಿತು.
1.ಸೋಮವಾರಪೇಟೆ ತಾಲ್ಲೂಕಿನ ಪ್ರವಾಸಿತಾಣಗಳಿಗೆ ಪ್ರವಾಸಿಗರನ್ನು ಆಕರ್ಷಿಸುವ ದೃಷ್ಟಿಯಿಂದಮಲ್ಲಳ್ಳಿ ಜಲಪಾತ, ಹೊನ್ನಮ್ಮನ ಕೆರೆ ಬೆಟ್ಟ, ಮಕ್ಕಳಗುಡಿಬೆಟ್ಟ, ಭತ್ತದರಾಶಿ, ಕೋಟೆಬೆಟ್ಟ, ಮಳೆಮಲ್ಲೇಶದ್ಯಮ ಇಲಾಖೆ ಬೆಟ್ಟಗಳಿಗೆ ಕೇಬಲ್ ಕಾರ್ ಯೋಜನೆ ರೂಪಿಸಲು ಪ್ರವಾಸೋದ್ಯಮ ಇಲಾಖೆ ಕ್ರಮಕೈಗೊಳ್ಳಬೇಕು. ಸೈನಿಕ ಕುಟುಂಬಗಳು ಹೆಚ್ಚಿರುವುದರಿಂದ ಫೀಲ್ಡ್‍ಮಾರ್ಷಲ್ ಕಾರ್ಯಪ್ಪ ಅವರು ಜನಿಸಿದ ಶನಿವಾರಸಂತೆಯಲ್ಲಿ ಆರ್ಮಿ ಕ್ಯಾಂಟಿನ್ ಪ್ರಾರಂಭಿಸಬೇಕು.
2. ಶನಿವಾರಸಂತೆ ಹೋಬಳಿಗೆ ಸೇರಿದ ಈ ಭಾಗದಲ್ಲಿರುವ ಹೊನ್ನಮ್ಮನ ಕೆರೆ, ಮಾಲಂಬಿ ಬೆಟ್ಟ, ದೊಡ್ಡಪಾರೆ, ಮುಳ್ಳೂರು ಜೈನ ಬಸದಿ ಮುಂತಾದ ಪ್ರೇಕ್ಷಣಿಯ ಸ್ಥಳಗಳಿರುವುದರಿಂದ ಈ ಭಾಗಕ್ಕೆ ಪ್ರವಾಸೋದ್ಯಮ ಇಲಾಖೆಯ ಸವಲತ್ತುಗಳನ್ನು ನೀಡುವಂತೆ ಸರ್ಕಾರವನ್ನು ಒತ್ತಾಯಿಸಲಾಯಿತು.
3.ಸೋಮವಾರಪೇಟೆಯಲ್ಲಿರುವ ಗ್ರಂಥಾಲಯವನ್ನು ಮೇಲ್ದರ್ಜೆಗೇರಿಸಬೇಕು. ವಿದ್ಯಾರ್ಥಿಗಳಿಗೆ ಉಪವಾಗುವಂತೆ ಶಾಲಾ ಸಮಯದಲಿ ಸರ್ಕಾರಿ ಬಸ್‍ಗಳನ್ನು ಕಲ್ಪಿಸಬೇಕು.
4.ತಾಲ್ಲೂಕಿನ ಲೇಖಕರ ಸಾಹಿತ್ಯ ಕೃತಿಗಳನ್ನು ಸರ್ಕಾರದ ಗ್ರಂಥಾಲಯಕ್ಕೆ ಖರೀದಿಸಬೇಕು.
5.ಅನ್ಯಭಾಷಿಕರು ವಾಸಿಸುವ ಸ್ಥಳಗಳಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಅಯೋಜಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕಾರ್ಯ ಮಾಡಬೇಕು. ತಾಲ್ಲೂಕಿನ ಸಾಹಿತಿಗಳ ಕೃತಿಗಳನ್ನು ಪ್ರಾಥಮಿಕ ಹಾಗೂ ಪೌಢಶಾಲಾ ವಿಭಾಗದಲ್ಲಿ ಅಳವಡಿಸಬೇಕು.
6.ಸೋಮವಾರಪೇಟೆ ತಾಲ್ಲೂಕಿನ ಭಾಗಗಳು ಕುಶಾಲನಗರ ತಾಲ್ಲೂಕಿಗೆ ಸೇರಿರುವ ಕಾರಣ ಅನ್ಯಾಯವಾಗಿದ್ದು, ಸಕಲೇಶಪುರ ತಾಲ್ಲೂಕಿನ ಹೆತ್ತೂರು, ಯಸಳೂರು ಹೋಬಳಿಗಳನ್ನು ಸೋಮವಾರಪೇಟೆ ಸೇರಿಸಲು ಸರ್ಕಾರ ಕ್ರಮಕೈಗೊಳ್ಳಬೇಕು. ಹಾರಂಗಿ ಹಿನ್ನೀರಿನಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಿಸಬೇಕು. ಅಲ್ಲಿನ ಗ್ರಾಮಗಳ ರಸ್ತೆಯನ್ನು ಡಾಮರೀಕರಣಗೊಳಿಸಬೇಕು. ಅತೀವೃಷ್ಟಿಯಿಂದ ತಾಲ್ಲೂಕಿನ ಜನರು ಸಂಕಷ್ಟದಲ್ಲಿದ್ದು ಸರ್ಕಾರ ವಿಶೇಷ್ ಪ್ಯಾಕೇಜ್ ಘೋಷಿಸಬೇಕು. ಮಡಿಕೇರಿಯಲ್ಲಿ ಸಾಹಿತ್ಯ ಭವನ ನಿರ್ಮಿಸಲು ಸರ್ಕಾರ 10ಕೋಟಿ ಅನುದಾನ ಕಲ್ಪಿಸಬೇಕು.

ಕಾರ್ಯಕ್ರಮ ದಿವ್ಯಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಶಾಖ ಮಠದ ಶಂಭುನಾಥಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ಸಾಹಿತ್ಯ ಪ್ರೇಮವನ್ನು ಬೆಳಸುವ ಮೂಲಕ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಲು, ಶ್ರಮಿಸಬೇಕು. ಸಾಹಿತ್ಯ ಮನೆಮನೆಗೆ ತಲುಪುವ ಕೆಲಸ ಮಾಡಬೇಕು. ಮನೆಮನೆಗಳಲ್ಲಿ ಕವಿಗೋಷ್ಠಿ ಆಗಬೇಕು. ಕನ್ನಡವನ್ನು ನೆನಪಿಸುವ ಕಾರ್ಯಕ್ರಮ ನವೆಂಬರ್ ತಿಂಗಳಿಗೆ ಮಾತ್ರ ಸಿಮೀತವಾಗಬಾರದು. ಅದು ನಿತ್ಯನಿರಂತರ ಆಗಬೇಕು. ಸಾಹಿತ್ಯವನ್ನು ಮಕ್ಕಳಿಂದಲೇ ಬೆಳಸಬೇಕೆನ್ನುವ ಉದ್ದೇಶದಿಂದ ಶ್ರೀಮಠದ ಆಶಯದಲ್ಲಿ ರಾಜ್ಯದ 20 ಜಿಲ್ಲೆಗಳಲ್ಲಿ ಮಕ್ಕಳ ಸಾಹಿತ್ಯ ಪರಿಷತ್‍ನ ಘಟಕವನ್ನು ತೆರೆದಿದ್ದೇವೆ ಎಂದು ಹೇಳಿದರು.

ಮೈಸೂರು ರತ್ನಪುರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಮಹಾದೇವಸ್ವಾಮಿ ಹೆಗ್ಗೂಠ್ಠಾರ ಮಾತನಾಡಿ, ಕನ್ನಡವನ್ನು ಬೆಳೆಸುವ ಕೆಲಸ ಹಳ್ಳಿಗಳಿಂದ ಪ್ರಾರಂಭವಾಗಿದ್ದು, ಹಳ್ಳಿಗಳು ನಗರಗಳನ್ನು ಸಾಕುವ ಕೇಂದ್ರವಾಗಿವೆ. ಆದರೆ ಇಂದು ಹಳ್ಳಿಯ ರೈತನ ಬೆನ್ನೆಲುಬು ಮುರಿದುಹೋಗಿದೆ. ರೈತ ಬೆಳೆದ ಬೆಳೆಗೆ ಬೆಲೆ ಇಲ್ಲದೆ ಅವನ ಅಸ್ಮಿತೆಗೆ ಧಕ್ಕೆ ಬಂದಿದೆ. ಇಂದು ತಿನ್ನುವ ಆಹಾರ ಕಲುಷಿತಗೊಂಡಿದ್ದು, ಮನುಷ್ಯನ ಆರೋಗ್ಯವು ಹದಗೆಟ್ಟಿದೆ. ಭಾಷೆಗೆ ಮತ್ತು ಬದುಕಿಗೂ ನಿಕಟ ಸಂಬಂಧವಿದ್ದು, ನಮ್ಮನಾಳುವ ಸರ್ಕಾರಗಳು ಕನ್ನಡವನ್ನು ಅನ್ನದ ಭಾಷೆಯನ್ನಾಗಿ ಮಾಡಬೇಕಾಗಿದೆ ಎಂದರು.

ವರದಿ : ಹಿರಿಕರ ರವಿ